IIT Kharagpur: ಸಾವಿಗೆ ಶರಣಾದ ವಿದ್ಯಾರ್ಥಿ!; ಇಷ್ಟೊಂದು ಒತ್ತಡ ಏಕೆ ಎಂದು ಪ್ರಶ್ನಿಸಿದ ಮನನೊಂದ ತಂದೆ

Untitled design - 2023-10-19T154246.728
Published on

ನವದೆಹಲಿ: ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಬುಧವಾರ (ಅ.18) ವರದಿಯಾಗಿದ್ದು, ಪುತ್ರನ ಸಾವನ್ನು ನೆನೆದು ಕಣ್ಣೀರಿಟ್ಟ ತಂದೆ, ಮಕ್ಕಳಿಗೆ ಯಾಕೆ ಈ ಒತ್ತಡ ಎಂದು ಕಾಲೇಜಿನ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ.

ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನ ನಾಲ್ಕನೇ ವರ್ಷದ ವಿದ್ಯಾರ್ಥಿ ಕೆ. ಕಿರಣ್ ಚಂದ್ರ ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಚಂದ್ರು ಅವರು ತುಂಬಾ ಒತ್ತಡದಲ್ಲಿದ್ದರು ಎಂದು ಅವರ ತಂದೆ ಕೆ. ಚಂದರ್ ಹೇಳಿಕೊಂಡಿದ್ದು, "ಯಾಕೆ ಇಷ್ಟೊಂದು ಒತ್ತಡ? ನಮ್ಮ ಮಗು ಏಕೆ ಐಐಟಿಯಲ್ಲಿ ಇಷ್ಟೊಂದು ಬಳಲುತ್ತಿದ್ದ" ಎಂದು ಮಾಧ್ಯಮಗಳಿಗೆ ತಿಳಿಸಿದರು.

ಚಂದ್ರು ಅವರು ಲಾಲ್ ಬಹದ್ದೂರ್ ಶಾಸ್ತ್ರಿ (LBS) ಹಾಲ್ ಆಫ್ ರೆಸಿಡೆನ್ಸ್‌ನಲ್ಲಿ ತಂಗಿದ್ದರು. ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡರು ಎಂದು ಐಐಟಿ ಮಾಹಿತಿ ನೀಡಿದೆ. ಸುಮಾರು 7:30ರ ಸಮಯದಲ್ಲಿ, ವಿದ್ಯಾರ್ಥಿ ತನ್ನ ಇಬ್ಬರು ಸಹಪಾಠಿಗಳೊಡನೆ ತಮ್ಮ ಹಾಸ್ಟೆಲ್ ರೂಂನಲ್ಲಿದ್ದರು. ನಂತರದಲ್ಲಿ ಇಬ್ಬರು ಸಹಪಾಠಿಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಎಂದು ಹೊರ ಹೋಗಿದ್ದಾರೆ.

ರಾತ್ರಿ 8.30ರ ಸುಮಾರಿಗೆ, ಹಾಲ್‌ನಲ್ಲಿ ಓಡಾಡುತ್ತಿದ್ದ ಇತರೆ ವಿದ್ಯಾರ್ಥಿಗಳು ಚಂದ್ರು ರೂಂ ಒಳಗಿನಿಂದ ಲಾಕ್ ಮಾಡಿಕೊಂಡಿರುವುದನ್ನು ಗಮನಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಬಾಗಿಲನ್ನು ಬಲವಂತವಾಗಿ ತೆರೆದು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರ ಪ್ರಯತ್ನಗಳು ಸಫಲವಾಗದೆ ರಾತ್ರಿ 11:30ರ ವೇಳೆಗೆ ಚಂದ್ರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು ಎಂದು ಐಐಟಿ ಖರಗ್‌ಪುರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net