

Daughter killed: ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ ಮನೆಯಲ್ಲಿ ಹಣ ಕದಿಯುತ್ತಿದ್ದಾಳೆ ಎಂದು ತಂದೆಯೇ ತನ್ನ 13 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಶನಿವಾರ(ಸೆ. 27) ವರದಿಯಾಗಿದೆ.
ಮೃತಳನ್ನು ಬಿಚೌಲಾ ಗ್ರಾಮದ ನಿವಾಸಿ ಸೋನಮ್ (13) ಎಂದು ಗುರುತಿಸಲಾಗಿದೆ. ಈಕೆ ಏಳನೇ ತರಗತಿಯ ವಿದ್ಯಾರ್ಥಿನಿ. ಆಕೆಯ ತಂದೆ ಅಜಯ್ ಶರ್ಮಾ ಆರೋಪಿ. ಶುಕ್ರವಾರ (ಸೆ.26) ಸಂಜೆ 4 ಗಂಟೆ ಸುಮಾರಿಗೆ ಜಿಲ್ಲೆಯ ಅನುಪ್ಶಹರ್ ಪೊಲೀಸ್ ಠಾಣೆ ಪ್ರದೇಶದ ಸೇತುವೆಯ ಕೆಳಗೆ ಪೊದೆಗಳಲ್ಲಿ ಶಾಲಾ ಸಮವಸ್ತ್ರದಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಹುಡುಗಿ ಶವವನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ. ಬಾಲಕಿ ಗುರುವಾರ ಶಾಲೆಗೆ ಹೋಗಿದ್ದಳು. ಶಾಲೆ ಮುಗಿದ ನಂತರ ತಂದೆ ಅಜಯ್ ಶರ್ಮಾ ಅವಳನ್ನು ಕರೆದುಕೊಂಡು ಹೋಗಿದ್ದರು ಎಂದು ತಿಳಿದುಬಂದಿದೆ.
ಬಾಲಕಿಯನ್ನು ಶಾಲೆಯಿಂದ ಮನೆಗೆ ಕರೆದುಕೊಂಡು ಹೋಗುವಾಗ ತನ್ನ ಹೊಲಕ್ಕೆ ಕರೆದೊಯ್ದಿದ್ದು, ಸ್ಕಾರ್ಫ್ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಕಾಲುವೆಗೆ ಎಸೆದಿದ್ದಾಗಿ ಆರೋಪಿ ತಂದೆ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.
ಮಗಳು ಕಳೆದ ಕೆಲವು ದಿನಗಳಿಂದ ಮನೆಯಿಂದ ಹಣ ಕದಿಯುತ್ತಿದ್ದಳು. ಇದರಿಂದ ತಂದೆ ತಾಯಿ ನಡುವೆ ಜಗಳಕ್ಕೆ ಕಾರಣವಾಗಿತ್ತು ಎನ್ನಲಾಗಿದೆ. ಮಗಳನ್ನು ಕೊಂದ ಬಳಿಕ ಶಾಲೆಗೆ ಮಗಳ ಸಂಬಂಧಿಕರ ಊರಿಗೆ ಹೋಗಿದ್ದಾಳೆ. ಮುಂದಿನ ಮೂರ್ನಾಲ್ಕು ದಿನಗಳವರೆಗೆ ಅವರು ಶಾಲೆಗೆ ಬರುವುದಿಲ್ಲ ಎಂದು ತಿಳಿಸಿದ್ದ ಎನ್ನಲಾಗಿದೆ. (ಏಜೆನ್ಸೀಸ್)