ಮಾವ-ಸೊಸೆ ಜಗಳ ಕೊಲೆಯಲ್ಲಿ ಅಂತ್ಯ

Published on

ಸಾಲಿಗ್ರಾಮ: ಮನೆ ಮತ್ತು ಜಮೀನನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಾಯಿಸಿ ಮಾವನೊಂದಿಗೆ ಸೊಸೆ ತೆಗೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮಾವನ ಮೇಲೆ ಸೊಸೆ ಹಲ್ಲೆ ನಡೆಸಿದ್ದರಿಂದ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.

ತಾಲೂಕಿನ ಕೆಡಗ ಗ್ರಾಮದ ನಿವಾಸಿ ನಾಗರಾಜು (70) ಕೊಲೆಯಾದವರು. ಘಟನೆಯ ವಿವರ: ತಾಲೂಕಿನ ಕೆಡಗ ಗ್ರಾಮದ ನಾಗರಾಜು ಅವರ ಮಗ ಮೈಸೂರು ನಗರ ಸಿಎಆರ್‌ನಲ್ಲಿ ಪೊಲೀಸ್ ಆಗಿರುವ ಪಂಚಾಕ್ಷರಿ ಮತ್ತು ಪತ್ನಿ ಡಿಲಾಕ್ಷಿ ತಮ್ಮ ಮಕ್ಕಳೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದು, ಆಗಾಗ್ಗೆ ಕೆಡಗ ಗ್ರಾಮಕ್ಕೆ ಹೋಗಿ ಬರುತ್ತಿದ್ದರು. ಕಳೆದ 20 ದಿನಗಳ ಹಿಂದೆ ಮನೆ ಕಟ್ಟಿಸಲು ಕೆಡಗ ಗ್ರಾಮಕ್ಕೆ ಆಗಮಿಸಿದ ಪತಿ, ಪತ್ನಿ ಗ್ರಾಮದಲ್ಲಿ ವಾಸವಾಗಿದ್ದುಕೊಂಡು ಪಂಚಾಕ್ಷರಿ ಮೈಸೂರಿಗೆ ಕೆಲಸಕ್ಕೆ ಹೋಗಿ ಬಂದು ಮಾಡುತ್ತಿದ್ದರು.

ಶನಿವಾರ ಎಂದಿನಂತೆ ಮಾವ ಮತ್ತು ಸೊಸೆ ನಡುವೆ ಆಸ್ತಿ ವಿಚಾರಕ್ಕೆ ಜಗಳ ಶುರುವಾಗಿದೆ. ಈ ವೇಳೆ ಜಗಳ ಅತಿರೇಕಕ್ಕೆ ಹೋದಾಗ ಮರದ ಪಟ್ಟಿ ಹಾಗೂ ಮಚ್ಚಿನಿಂದ ಮಾವನ ಮೇಲೆ ಡಿಲಾಕ್ಷಿ ಹಲ್ಲೆ ನಡೆಸಿದ್ದಾಳೆ. ಮಗ ಪಂಚಾಕ್ಷರಿ ಸ್ಥಳದಲ್ಲೇ ನೋಡುತ್ತಾ ನಿಂತಿದ್ದರೂ ಏನೂ ಮಾತನಾಡಲಿಲ್ಲ ಎಂದು ನಾಗರಾಜು ಪತ್ನಿ ಗೌರಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಜಗಳ ಬಿಡಿಸುವಂತೆ ನೆರೆಹೊರೆಯವರನ್ನು ಕರೆದುಕೊಂಡು ಬರುವಷ್ಟರಲ್ಲಿ ಪತಿ ನಾಗರಾಜು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಹತ್ತಿರ ಹೋಗಿ ನೋಡಿದಾಗ ಅವರು ಮೃತಪಟ್ಟಿದ್ದರು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ನನ್ನ ಗಂಡ ನಾಗರಾಜು ಅವರ ಸಾವಿಗೆ ಕಾರಣರಾದ ಸೊಸೆ ಡಿಲಾಕ್ಷಿ ಮತ್ತು ಅದಕ್ಕೆ ಕುಮ್ಮಕ್ಕು ನೀಡಿದ ಮಗ ಪಂಚಾಕ್ಷರಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತ ನಾಗರಾಜು ಅವರ ಪತ್ನಿ ಗೌರಮ್ಮ ಸಾಲಿಗ್ರಾಮ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಡಿಲಾಕ್ಷಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾ, ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ರಘು, ಇನ್‌ಸ್ಪೆಕ್ಟರ್‌ಗಳಾದ ಶಶಿಕುಮಾರ್ ಹಾಗೂ ಶಿವಪ್ರಕಾಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net