

ಲಖನೌ: ಮನೆಯ ಕೋಣೆಯಲ್ಲಿ ಬೆಚ್ಚಗೆ ಮಲಗಬೇಕಿದ್ದ ಬಾಲಕ ಯಾವುದೋ ಅಂಗಡಿಯ ಮುಂದೆ ಮಲಗಿದ್ದಾನೆ. ಅಮ್ಮನ ಮಡಿಲಲ್ಲಿರಬೇಕಾದವನ ಮಡಿಲಲ್ಲಿ ನಾಯಿಯಿದೆ. ಇಂತದ್ದೊಂದು ಮನಕಲಕುವ ಫೋಟೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದೀಗ ಆ ಫೋಟೋದಲ್ಲಿರುವ ಬಾಲಕನ ಕಥೆ ಹೊರಬಿದ್ದಿದೆ.
ಫೋಟೋದಲ್ಲಿರುವ ಬಾಲಕನ ಹೆಸರು ಅಂಕಿತ್. ಈತನ ತಂದೆ ಯಾವುದೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾನೆ. ತಾಯಿಯೂ ಬಿಟ್ಟು ಹೋಗಿದ್ದಾಳೆ. ತಂದೆ ತಾಯಿಯನ್ನು ಬಿಟ್ಟು ಕುಟುಂಬದ ಯಾರೋಬ್ಬರೂ ಗೊತ್ತಿರದ ಬಾಲಕ ತನ್ನ ಪ್ರೀತಿಯ ನಾಯಿಯೊಂದಿಗೆ ಜೀವನ ನಡೆಸುತ್ತಿದ್ದಾನೆ. ಟೀ ಶಾಪ್ ಒಂದರಲ್ಲಿ ಕೆಲಸ ಮಾಡಿ, ತನ್ನ ಮತ್ತು ನಾಯಿಯ ಹೊಟ್ಟೆ ತುಂಬಿಸಿಕೊಳ್ಳುತ್ತಾನಂತೆ.
ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಉತ್ತರ ಪ್ರದೇಶದ ಮುಜಾಫರ್ನಗರ್ ಆಡಳಿತ ಎಚ್ಚೆತ್ತುಕೊಂಡಿದ್ದು, ಬಾಲಕನನ್ನು ಹುಡುಕಿದೆ. ಇದೀಗ ಬಾಲಕನನ್ನು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಮೇಲ್ವಿಚಾರಣೆಯಲ್ಲಿಟ್ಟುಕೊಳ್ಳಲಾಗಿದೆ. ಆತನಿಗೆ ಉತ್ತಮ ಶಿಕ್ಷಣವನ್ನೂ ನೀಡಲಾಗುತ್ತಿರುವುದಾಗಿ ತಿಳಿಸಲಾಗಿದೆ. (ಏಜನ್ಸೀಸ್)