ಆ್ಯಂಬುಲೆನ್ಸ್ ಕೊಡದ ಆಸ್ಪತ್ರೆ; ಮಗಳ ಮೃತದೇಹವನ್ನು ಬೈಕ್​ ಮೇಲೆ ಸಾಗಿಸಿದ ತಂದೆ…

ambulance
Published on

ಶಹದೋಲ್: ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಆಸ್ಪತ್ರೆ ಆಡಳಿತವು ಸೋಮವಾರ ಶಹದೋಲ್‌ನಲ್ಲಿ ಮೃತ ಯುವತಿಯನ್ನು ಸಾಗಿಸಲು ಆಂಬ್ಯುಲೆನ್ಸ್ ನಿರಾಕರಿಸಿದ ನಂತರ ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರು ತಮ್ಮ ಮಗಳ ಮೃತದೇಹವನ್ನು ಬೈಕ್‌ನಲ್ಲಿ ಸಾಗಿಸಿದರು.

ಆದರೆ, ಶಹದೋಲ್ ಕಲೆಕ್ಟರ್ ವಂದನಾ ವೈದ್ಯ ಈ ಪ್ರಕರಣ ಕುರಿತು ಮಾಹಿತಿ ಪಡೆದ ತಕ್ಷಣ, ಅವರು ವ್ಯಕ್ತಿಯನ್ನು ಮಾರ್ಗ ಮಧ್ಯೆ ನಿಲ್ಲಿಸಿ ಶವವನ್ನು ಸಾಗಿಸಲು ಆಂಬ್ಯುಲೆನ್ಸ್ ಒದಗಿಸಿದರು.

ಶಹದೋಲ್ ಜಿಲ್ಲೆಯ ಬುಧಾರ್ ಬ್ಲಾಕ್‌ನ ಕೋಟಾ ಗ್ರಾಮದ ನಿವಾಸಿ ಲಕ್ಷ್ಮಣ್ ಸಿಂಗ್ ಗೌಡ್ ಅವರು ತಮ್ಮ 13 ವರ್ಷದ ಮಗಳು ಮಾಧುರಿ ಗೌಡ್​ಳನ್ನು ಚಿಕಿತ್ಸೆಗಾಗಿ ಮೇ 12 ರಂದು ಶಾಹದೋಲ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಮಾಧುರಿ ಸಿಕಲ್ ಸೆಲ್ ಕಾಯಿಲೆಯಿಂದ ಬಳಲುತ್ತಿದ್ದರು. ಎರಡು ದಿನ ಚಿಕಿತ್ಸೆ ಮುಂದುವರಿದರೂ ಮಾಧುರಿಯ ಜೀವ ಉಳಿಸಲಾಗಲಿಲ್ಲ. ಮಾಧುರಿ ಸಾವಿನ ನಂತರ, ಸಂಬಂಧಿಕರು ಶವವನ್ನು ಮನೆಗೆ ಕೊಂಡೊಯ್ಯಲು ಶವ ವಾಹನವನ್ನು ಕೇಳಿದರು. ಆದರೆ ಆಸ್ಪತ್ರೆಯ ಆಡಳಿತವು ಕೇವಲ 15 ಕಿಮೀ ತನಕ ಮಾತ್ರವೇ ಶವವಾಹನವನ್ನು ನೀಡಬಹುದು. ಮತ್ತು 70 ಕಿಮೀ ದೂರದ ತನಕ ಶವವಾಹನ ಹೋಗುವುದಿಲ್ಲ ಎಂದು ಹೇಳಿ ಅವರ ಬೇಡಿಕೆ ನಿರಾಕರಿಸಿತು.

ಮಾಧುರಿಯ ತಂದೆ ಲಕ್ಷ್ಮಣ್ ಸಿಂಗ್ ಗೌಡ್, “ನಾವು ಆಸ್ಪತ್ರೆಯಲ್ಲಿ ಶವ ವಾಹನವನ್ನು ಕೇಳಿದ್ದೆವು. ಆದರೆ ಅದು 15 ಕಿಮೀಗಿಂತ ಹೆಚ್ಚು ಲಭ್ಯವಿರುವುದಿಲ್ಲ ಎಂದು ಅವರು ಹೇಳಿದರು. ನಾವೇ ವ್ಯವಸ್ಥೆ ಮಾಡುವಂತೆ ಕೇಳಿಕೊಂಡರು. ಹಣದ ಕೊರತೆಯಿಂದ ಬೈಕ್‌ನಲ್ಲಿಯೇ ಮಗಳ ಶವ ತೆಗೆದುಕೊಂಡು ಹೋಗಿದ್ದೆವು.

ಜಿಲ್ಲಾಧಿಕಾರಿ ವಂದನಾ ವೈದ್ಯ ಘಟನೆ ಕುರಿತು ಮಾಹಿತಿ ಪಡೆದು ಬಾಲಕಿಯ ತಂದೆಯ ಜತೆ ಸಂಪರ್ಕ ಬೆಳೆಸಿದ್ದಾರೆ. ನಂತರ ಮೃತದೇಹಕ್ಕೆ ಕೂಡಲೇ ವಾಹನ ಕಳುಹಿಸುವಂತೆ ಸಿವಿಲ್ ಸರ್ಜನ್​ಗೆ ಸೂಚಿಸಿದರು. ಸಿವಿಲ್ ಸರ್ಜನ್ ಡಾ ಜಿ.ಎಸ್.ಪರಿಹರ್ ಕೂಡ ಸ್ಥಳಕ್ಕೆ ಆಗಮಿಸಿ ಸಂತ್ರಸ್ತ ಕುಟುಂಬಕ್ಕೆ ಶವ ವಾಹನವನ್ನು ಒದಗಿಸಿ ಅವರ ಗ್ರಾಮಕ್ಕೆ ಕಳುಹಿಸಿದ್ದಾರೆ. ಜಿಲ್ಲಾಧಿಕಾರಿಗಳು ಕುಟುಂಬ ಸದಸ್ಯರಿಗೆ ಧನಸಹಾಯ ತಿಳಿಸಿದರು. (ಏಜೆಎನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net