ಗಂಡು ಮಗ ಬೇಕೆಂದು, ತಾಯಿಯ ಕಣ್ಮುಂದೆ 7 ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಕೊಂದ ತಂದೆ Arrest

Arrest
Published on

Ahmedabad: ನರ್ಮದಾ ಕಾಲುವೆಗೆ ಏಳು ವರ್ಷದ ಮಗಳನ್ನು ತಳ್ಳಿ ಕೊಲೆ ಮಾಡಿರುವ ತಂದೆಯನ್ನು ಪೊಲೀಸರು ಬಂಧಿಸಿದ (Arrest) ಘಟನೆ ಅಹಮಾದಾಬಾದ್‌ನಲ್ಲಿ ನಡೆದಿದೆ.

ಹೆತ್ತ ತಾಯಿಯ ಕಣ್ಮುಂದೆಯೇ ಈ ಘಟನೆ ನಡೆದಿದ್ದು, ಗಂಡನ ಬೆದರಿಕೆಗೆ ಹೆದರಿ ಮಹಿಳೆ ಸುಮ್ಮನಾಗಿದ್ದಳು. ಜೂನ್ 10ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರಂಭದಲ್ಲಿ ತನ್ನ ಮಗಳಾದ ಏಳು ವರ್ಷದ ಭೂಮಿಕಾಳ ಸಾವಿನ ರಹಸ್ಯವನ್ನು ತಾಯಿ ಮರೆಮಾಡಿದ್ದಳು ಆದರೆ ನಂತರದಲ್ಲಿ ಪೊಲೀಸರಿಗೆ ತಿಳಿಸಿದ್ದಾಳೆ.

ತಂದೆಯಾದ ವಿಜಯ್ ಸೋಲಂಕಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯ್ ಸೋಲಂಕಿ ಮತ್ತು ಅಂಜನಾ ಸೋಲಂಕಿ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು.

ಜೂನ್ 10ರಂದು ವಿಜಯ್ ಸೋಲಂಕಿ ಪತ್ನಿ ಮತ್ತು ಹಿರಿಯ ಮಗಳು ಭೂಮಿಕಾ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದನು. ಇದೇ ಸಮಯದಲ್ಲಿ ಅಂಜನಾ ತನ್ನ ತವರು ಮನೆಗೆ ಹೋಗುವಂತೆ ಹೇಳಿದ್ದಾಳೆ. ಇದಕ್ಕೆ ಗಂಡ ವಿಜಯ್ ಸೋಲಂಕಿ ಒಪ್ಪದ ಕಾರಣ ಇಬ್ಬರ ನಡುವೆ ಜಗಳ ಶುರುವಾಗಿದೆ. ನಂತರ ವಿಜಯ್ ಸೋಲಂಕಿ ನರ್ಮದಾ ಕಾಲುವೆ ಬಳಿ ಬೈಕ್ ನಿಲ್ಲಿಸಿ ನನಗೆ ಗಂಡು ಮಗು ಬೇಕಿತ್ತು. ಆದ್ರೆ ನೀನು ಹೆಣ್ಣು ಮಗುವಿಗೆ ಜನ್ಮ ನೀಡಿದೆ ಎಂದು ಹೇಳಿ ಏಳು ವರ್ಷದ ಮಗಳು ಭೂಮಿಕಾಳನ್ನು ತುಂಬಿ ಹರಿಯುತ್ತಿದ್ದ ನರ್ಮದಾ ಕಾಲುವೆಗೆ ಎಸೆದಿದ್ದಾನೆ.

ಮಗಳು ಮೀನು ನೋಡಲು ಹೋಗಿ ಕಾಲುಜಾರಿ ಕಾಲುವೆಗೆ ಬಿದ್ದಿದ್ದಾಳೆ ಎಂದು ವಿಜಯ್ ಮತ್ತು ಅಂಜನಾ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಸತ್ಯ ಹೇಳಿದರೆ ವಿಚ್ಛೇದನ ನೀಡುವುದಾಗಿ ಹೆಂಡತಿಗೆ ವಿಜಯ್‌ ಬೆದರಿಕೆ ಹಾಕಿದ್ದನು. ಇದರಿಂದ ಅಂಜನಾ ಸತ್ಯ ಹೇಳದೇ ಸುಮ್ಮನಿದ್ದಳು.

ಇದೀಗ ಒಂದು ತಿಂಗಳ ನಂತರ ಮಗಳು ಭೂಮಿಕಾ ಸಾವಿನ ಸತ್ಯವನ್ನು ಅಂಜನಾ ಹೇಳಿದ್ದಾಳೆ. ಮೀನು ತೋರಿಸುವ ನೆಪದಲ್ಲಿ ಕಾಲುವೆ ಬಳಿ ಕರೆದುಕೊಂಡು ಹೋಗಿ ತನ್ನ ಗಂಡನೇ ಮಗಳನ್ನು ಕೊಂದಿದ್ದಾನೆ ಎಂದು ಅಂಜನಾ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಅಂಜನಾ ನೀಡಿದ ದೂರಿನ ಬೆನ್ನಲ್ಲೇ ಪೊಲೀಸರು ವಿಜಯ್ ಸೋಲಂಕಿಯನ್ನು ಬಂಧಿಸಿದ್ದಾರೆ. ಈ ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net