ಪುತ್ರನ ಹೊಡೆದು ಕೊಂದ ತಂದೆಯ ಬಂಧನ

arrested
Published on

ಬೆಂಗಳೂರು: ಪ್ರತಿನಿತ್ಯ ಮದ್ಯ ಸೇವಿಸಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ ಪುತ್ರನನ್ನು ತಂದೆಯೇ ಹಲ್ಲೆಗೈದು ಕುತ್ತಿಗೆ ಬಿಗಿದು ಹತ್ಯೆಗೈದಿದ್ದಾರೆ.
ನಾಗದೇವನಹಳ್ಳಿ ನಿವಾಸಿ ರಾಜೇಶ್(೩೫) ಕೊಲೆಯಾದವನು. ಕೃತ್ಯ ಎಸಗಿದ ಈತನ ತಂದೆ ಲಿಂಗಪ್ಪ(೫೮) ಎಂಬುವರನ್ನು ಬಂಧಿಸಲಾಗಿದೆ. ಆರೋಪಿ ಅ.೧೮ರ ಮಧ್ಯರಾತ್ರಿ ೨ ಗಂಟೆಗೆ ಪುತ್ರ ರಾಜೇಶ್‌ನ ತಲೆಗೆ ಮರದ ತುಂಡಿನಿಂದ ಹೊಡೆದು, ಬಳಿಕ ಹಗ್ಗದಿಂದ ಕುತ್ತಿಗೆ ಬಿಗಿದು ಹತ್ಯೆಗೈದಿದ್ದ. ಈ ಸಂಬಂಧ ಮೃತನ ಚಿಕ್ಕಮ್ಮನ ಪುತ್ರ ಲೋಕೇಶ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ನವುಲೆ ಗ್ರಾಮದ ಲಿಂಗಪ್ಪ ಹಲವು ವರ್ಷಗಳ ಹಿಂದೆಯೆ ಬೆಂಗಳೂರಿಗೆ ಬಂದಿದ್ದು, ಕೆಂಗೇರಿ ಸಮೀಪದ ನಾಗದೇವನಹಳ್ಳಿಯಲ್ಲಿ ಕುಟುಂಬ ಸಮೇತ ವಾಸವಾಗಿದ್ದಾರೆ. ಲಿಂಗಪ್ಪ ಅಡುಗೆ ಕೆಲಸ ಮಾಡಿಕೊಂಡಿದ್ದರು. ಇನ್ನು ಕೊಲೆಯಾದ ಪುತ್ರ ರಾಜೇಶ್ ಕ್ಯಾಬ್ ಚಾಲಕನಾಗಿದ್ದ. ಆರು ವರ್ಷಗಳ ಹಿಂದೆಯೇ ಆತನಿಗೆ ಮದುವೆಯಾಗಿದ್ದು, ದಂಪತಿಗೆ ಒಂದು ಮಗು ಇದೆ. ಈ ಮಧ್ಯೆ ನಿತ್ಯ ಮದ್ಯ ಸೇವಿಸಿ ಗಲಾಟೆ ಮಾಡುತ್ತಿದ್ದರಿಂದ ಬೇಸತ್ತ ಪತ್ನಿ, ರಾಜೇಶ್ ಬಿಟ್ಟು ತವರು ಮನೆಗೆ ಹೋಗಿದ್ದಾರೆ. ಹೀಗಾಗಿ ತಂದೆ-ತಾಯಿ ಜತೆ ರಾಜೇಶ್ ವಾಸವಾಗಿದ್ದು, ಈಗಲೂ ಪ್ರತಿನಿತ್ಯ ಮದ್ಯ ಸೇವಿಸಿ ಬಂದು ತಂದೆ-ತಾಯಿ ಜತೆ ಗಲಾಟೆ ಮಾಡುತ್ತಿದ್ದ. ಕೆಲವೊಮ್ಮೆ ತಂದೆ ಮೇಲೆ ಹಲ್ಲೆಗೂ ಮುಂದಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಗ್ಗದಿಂದ ಕುತ್ತಿಗೆ ಬಿಗಿದು ಹತ್ಯೆ:
ಅ.೧೮ ರ ತಡರಾತ್ರಿ ಕುಡಿದು ಬಂದಿದ್ದ ರಾಜೇಶ್, ಮನೆಯ ಕಿಟಕಿ ಗಾಜು ಹೊಡೆದು, ಮನೆಯ ಗೇಟ್ ಅನ್ನು ಕಾಲಿನಿಂದ ಒದ್ದು ಗಲಾಟೆ ಮಾಡಿದ್ದ. ಜತೆಗೆ ತಂದೆ ಲಿಂಗಪ್ಪ ಜತೆ ವಾಗ್ವಾದ ಮಾಡಿದ್ದಾನೆ. ಈ ವಿಚಾರವನ್ನು ರಾಜೇಶ್ ತಾಯಿ ಪುಟ್ಟಮ್ಮ, ತನ್ನ ಸಹೋದರಿ ಪುತ್ರ ಲೋಕೇಶ್‌ಗೆ ತಿಳಿಸಿದ್ದಾರೆ. ಮತ್ತೊಂದೆಡೆ ಮಗನ ವರ್ತನೆಗೆ ಕೋಪಗೊಂಡ ಲಿಂಗಪ್ಪ, ಆತನಿಗೆ ಕೈಯಿಂದ ಹೊಡೆದು, ಕಾಲಿನಿಂದ ಒದಿದ್ದಾರೆ. ಕೆಳಗೆ ಬಿದ್ದ ರಾಜೇಶ್‌ನ ಕೈಗಳನ್ನು ಹಿಂದಕ್ಕೆ ಕಟ್ಟಿ, ಮರದ ತುಂಡಿನಿಂದ ತಲೆಗೆ ಹೊಡೆದಿದ್ದಾರೆ. ಬಳಿಕ ಕುತ್ತಿಗೆಗೆ ಹಗ್ಗ ಬಿಗಿದು ಹತ್ಯೆಗೈದಿದ್ದಾರೆ. ಇದೇ ವೇಳೆ ವಿಚಾರ ತಿಳಿದು ಸ್ಥಳಕ್ಕೆ ಬಂದ ದೂರುದಾರ ಲೋಕೇಶ್, ಪೊಲೀಸ್ ಸಹಾಯವಾಣಿ ೧೧೨ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆ ರವಾನಿಸಿದ್ದಾರೆ. ಬಳಿಕ ಲಿಂಗಪ್ಪರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net