

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಂಟ್ರಿಂಗ್ ಶೀಟ್ ಕದ್ದು ಪರಾರಿ ಆಗುವಾಗ ಸಿಕ್ಕಿಬಿದ್ದ ಯುವಕರ ಮೇಲೆ ಸೆಕ್ಯೂರಿ ಗಾರ್ಡ್‌ಗಳು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಗಾಯಾಳುಗಳ ಪೈಕಿ ಓರ್ವ ಮೃತಪಟ್ಟಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.
ಅಂಜನಾಪುರದ ಆವಲಹಳ್ಳಿ ನಿವಾಸಿ ಸಲ್ಮಾನ್ (25) ಮೃತ ಯುವಕ. ಸಲೀಂ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಇಬ್ಬರು ಕಾವಲುಗಾರರು ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೌತ್ ಅವೆನ್ಯೂ ಲೇಔಟ್‌ನಲ್ಲಿ ಗುರುವಾರ ಮುಂಜಾನೆ 3.30ರಲ್ಲಿ ಈ ಘಟನೆ ನಡೆದಿದೆ. ಆವಲಹಳ್ಳಿ ನಿವಾಸಿಗಳಾದ ಸಲ್ಮಾನ್ ಮತ್ತು ಸಲೀಂ ಮುಂಜಾನೆ ದ್ವಿಚಕ್ರ ವಾಹನದಲ್ಲಿ ಸೌತ್ ಅವೆನ್ಯೂ ಲೇಔಟ್ ನಿರ್ಮಾಣ ಹಂತದ ಕಟ್ಟಡದ ಬಳಿ ಬಂದಿದ್ದರು.
ಎರಡು ಸೆಂಟ್ರಿಂಗ್ ಶೀಟ್‌ಗಳನ್ನು ಕದ್ದು ಪರಾರಿ ಆಗಲು ಮುಂದಾಗಿದ್ದರು. ಸೆಕ್ಯೂರಿಗಾರ್ಡ್‌ಗಳು ಈ ಇಬ್ಬರನ್ನು ಹಿಡಿದು ಕೈ-ಕಾಲು ಕಟ್ಟಿಹಾಕಿ ಕೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದರು. ಬೆಳಗ್ಗೆ 7.30ರಲ್ಲಿ ಸಲ್ಮಾನ್ ಪ್ರಜ್ಞೆ ತಪ್ಪಿದ್ದಾನೆ. ಸೆಕ್ಯೂರಿ ಗಾರ್ಡ್‌ಗಳು ಹೊಯ್ಸಳ ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪರೀಕ್ಷಿಸಿದ ವೈದ್ಯರು ಸಲ್ಮಾನ್ ಈಗಾಗಲೇ ಮೃತಟ್ಟಿರುವುದಾಗಿ ದೃಢಪಡಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸಲೀಂಗೆ ಚಿಕಿತ್ಸೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೋಣನಕುಂಟೆ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.