ಕೃಷಿ ಪತ್ತಿನ ಸಂಘದಿಂದ ರೈತರ ಏಳಿಗೆ

1020
Published on

ಬೋರಗಾಂವ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ರೈತರ ಏಳಿಗೆಗೆ ಸಹಕಾರಿಯಾಗಿದ್ದು, ಸರ್ಕಾರದ ವಿವಿಧ ಯೋಜನೆಗಳಡಿ ರೈತರ ಆರ್ಥಿಕ ಉನ್ನತಿಗೆ ಪ್ರಯತ್ನಿಸಲಾಗಿದೆ ಎಂದು ಸಂಘದ ಅಧ್ಯಕ್ಷ, ಯುವ ಮುಖಂಡ ಉತ್ತಮ ಪಾಟೀಲ ಹೇಳಿದ್ದಾರೆ.

ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 44ನೇ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ವತಿಯಿಂದ ಕೇವಲ ಆರ್ಥಿಕ ವ್ಯವಹಾರ ಮಾಡದೆ ರೈತರಿಗೆ ರಸಗೊಬ್ಬರ, ಕೃಷಿಯಂತ್ರಗಳು, ಕೀಟನಾಶಕ, ಕೃಷಿ ಪ್ರದರ್ಶನದಲ್ಲಿ ಮಾರ್ಗದರ್ಶನ, ನ್ಯಾಯಬೇಲೆ ಅಂಗಡಿ ಮುಖಾಂತರ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಜತೆಗೆ ಮಹಿಳೆಯರಿಗೆ ಪಟ್ಟಣದಲ್ಲಿ ಉದ್ಯೋಗ ಅವಕಾಶ ಸಿಗಲು ಗಾರ್ಮೆಂಟ್ ಸ್ಥಾಪಿಸಲಾಗಿದೆ ಎಂದರು.

ಸಂಘದಲ್ಲಿ 2789 ಸದಸ್ಯರಿದ್ದು, 2.8 ಕೋಟಿ ರೂ.ಷೇರು ಬಂಡವಾಳ, 6.7 ಕೋಟಿ ರೂ. ನಿಧಿ, 30.85 ಕೋಟಿ ರೂ. ಠೇವು ಹೊಂದಿದೆ. ರೈತರಿಗೆ, ವ್ಯಾಪಾರಸ್ಥರಿಗೆ ಸಂಘದ ವತಿಯಿಂದ 12.57 ಕೋಟಿ ರೂ. ಸಾಲ ಹಾಗೂ ಬ್ಯಾಂಕ್‌ನಿಂದ 30.64 ಕೋಟಿ ರೂ. ಸಾಲ ವಿತರಿಸಲಾಗಿದೆ. ಬಿಡಿಸಿಸಿ ಬ್ಯಾಂಕ್‌ನಿಂದ ಪಡೆದ ಸಾಲದಲ್ಲಿ ಶೇ.97 ಮರುಪಾವತಿ ಮಾಡಲಾಗಿದ್ದು, ವರದಿ ಸಾಲಿನಲ್ಲಿ ಸಂಘವು 90.10 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದ ಅವರು, ಮಣ್ಣು ಪರೀಕ್ಷೆ ಕೇಂದ್ರ ಶೀಘ್ರ ಆರಂಭಿಸಲಾಗುವುದು ಎಂದರು.

ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಟಿ.ಚೌಗುಲೆ, ಲಾಭ-ಹಾನಿ ಅಂದಾಜು ಪತ್ರಿಕೆ ಓದಿ, ಮಂಜೂರಾತಿ ಪಡೆದರು. ಸಂಘದ ಸದಸ್ಯರಿಗೆ ಸಾಲ ಮನ್ನಾ ಬಗ್ಗೆ ಮಾಹಿತಿ ನೀಡಿದರು. ಕರೊನಾ ತಡೆಗೆ ಶ್ರಮಿಸಿದ ಪಟ್ಟಣದ ವೈದ್ಯರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಬಾಳಾಸಾಬ ಸಾತಪೂತೆ, ರಾಜೇಂದ್ರ ಪಾಟೀಲ, ಪ್ರವೀಣ ಪಾಟೀಲ, ಸುನೀತಾ ಬಂಕಾಪುರೆ, ಪ್ರಭಾವತಿ ಪಾಟೀಲ, ಸುಮಿತ ರೊಡ್ಡ, ರಾಜು ಐದಮಾಳೆ, ತೈಮೂರ್ ಮುಜಾವರ, ರಾಜು ಗಜರೆ, ಅರಿಹಂತ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಅಶೋಕ ಬಂಕಾಪುರೆ, ಅಭಯಕುಮಾರ ಮಗದುಮ್ಮ, ಶಿವಾನಂದ ರಾಜಮಾನೆ, ರಾಜು ಮಗದುಮ್ಮ, ಕಾಕಾಸಾಬ ಬೇಳಂಕೆ, ರಾಕೇಶ ಫಿರಗಣ್ಣವರ ಇತರರು ಇದ್ದರು.

ನಿರ್ದೇಶಕ ರಾಜೇಂದ್ರ ಐದಮಾಳೆ ಸ್ವಾಗತಿಸಿದರು. ರಾವಸಾಬ ಪಚಂಡಿ ನಿರೂಪಿಸಿದರು. ನಿರ್ದೇಶಕ ಪ್ರದೀಪ ಮಾಳಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net