

ಆನಂದಪುರ: ಭೂಮಿ ಹುಣ್ಣಿಮೆ ಅಂಗವಾಗಿ ಭತ್ತದ ಗದ್ದೆ, ಅಡಕೆ ತೋಟಗಳಲ್ಲಿ ರೈತರು ಭೂಮಿ ತಾಯಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿದರು.
ಹಬ್ಬದ ಹಿಂದಿನ ದಿನವೇ ಪೂಜೆ ಮಾಡುವ ಸ್ಥಳವನ್ನು ಗೋಮಯದಿಂದ ತೊಳೆದು ಶುದ್ಧಗೊಳಿಸಿ ಮಾವಿನ ಎಲೆ, ಬಾಳೆ ಕಂದು, ಕಬ್ಬಿನ ತುದಿ, ಹೂವಿನ ಹಾರಗಳಿಂದ ತೋರಣ ಕಟ್ಟಿದ್ದರು. ಕೆಲವು ರೈತರು ಹೊಲದಲ್ಲಿ ಎತ್ತರದ ಚಪ್ಪರ ಹಾಕಿ ಕಮಾನು ನಿರ್ಮಿಸಿ ಸಿಂಗರಿಸಿದ್ದರು. ಇನ್ನೂ ಕೆಲವರು ಅಡಕೆ ಮರಗಳಿಗೆ ಹಸಿರು ಸೀರೆ ತೊಡಿಸಿ ಭೂತಾಯಿಯ ರೂಪ ನೀಡಿ ಪೂಜಿಸಿದರು.
ಚೀನಿಕಾಯಿ ಕಡಬು, ಉಂಡೆ, ಚಕ್ಕುಲಿ, ಪಾಯಸ, ಹೋಳಿಗೆ ಮತ್ತಿತರ ಖಾದ್ಯ ಸಿದ್ಧಪಡಿಸಿ ಭೂಮಣ್ಣಿ ಬುಟ್ಟಿಯಲ್ಲಿ ಇಟ್ಟುಕೊಂಡು ತಲೆ ಮೇಲೆ ಹೊತ್ತು ಹೊಲಗಳಿಗೆ ಸಾಗಿದರು. ಪೂಜೆ ನಂತರ ಭತ್ತದ ಗದ್ದೆ, ತೋಟದ ವಿವಿಧೆಡೆ ಚರಗ ಚೆಲ್ಲಿ ಭೂ ತಾಯಿಯ ಆಶೀರ್ವಾದ ಪಡೆದರು. ಸ್ನೇಹಿತರು, ಸಂಬಂಧಿಕರನ್ನು ಹಬ್ಬಕ್ಕೆ ಕರೆದು ಆತಿಥ್ಯ ನೀಡಿದರು.