

ಸೊರಬ: ತೊರವಂದ ಗ್ರಾಮದ ರೈತರು ಹಾಗೂ ಕೂಲಿ ಕಾರ್ಮಿಕರನ್ನು ಒಕ್ಕಲೆಬ್ಬಿಸಬಾರದು ಎಂದು ಒತ್ತಾಯಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ತಾಲೂಕು ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಮನವಿ ಸಲ್ಲಿಸಿದರು.
ಅಗಸನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊರವಂದ ಗ್ರಾಮದ ಸರ್ವೇ ನಂ.183ರ ಜಮೀನಿನಲ್ಲಿ ಗ್ರಾಮದ ಕೆಲ ರೈತರು ಹಾಗೂ ಕೂಲಿಕಾರ್ಮಿಕರು ಕಳೆದೆರಡು ವರ್ಷಗಳಿಂದ ವಾಸವಾಗಿದ್ದಾರೆ. ಆದರೆ ಈಗ ಆನವಟ್ಟಿ ನಾಡಕಚೇರಿಯ ಕಂದಾಯ ಸಿಬ್ಬಂದಿ ಮೌಖಿಕವಾಗಿ ತೆರವುಗೊಳಿಸುವಂತೆ ಪದೇಪದೆ ಬಂದು ರೈತರನ್ನು ಹಾಗೂ ಕೂಲಿ ಕಾರ್ಮಿಕರಿಗೆ ತೊಂದರೆ ನೀಡುತ್ತಿದ್ದಾರೆ. ರೈತರಿಗೆ ತೊಂದರೆ ನೀಡದಂತೆ ಸಿಬ್ಬಂದಿಗೆ ತಹಸೀಲ್ದಾರ್ ಅವರು ಸೂಚಿಬೇಕು. ಯಾವ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಅವರಿಗೆ ತೊಂದರೆ ಕೊಡಬಾರದು ಎಂದು ಒತ್ತಾಯಿಸಿದರು.
ರೈತಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಕೆ.ಎನ್.ಹಾಲೇಶಪ್ಪ ಗೌಡ, ತಾಲೂಕು ಅಧ್ಯಕ್ಷ ಚಂದ್ರಶೇಖರ ಬಾಪಟ್, ಜಿಲ್ಲಾ ಉಪಾಧ್ಯಕ್ಷರಾದ ಲೋಕಪ್ಪ, ಗುತ್ಯಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ವಿಕ್ರಮ್ ಪಾಟೀಲ್, ಶಾಂತಪ್ಪ, ಸುರೇಶ್, ಗಣೇಶಪ್ಪ, ನಾಗರಾಜ್, ಗುಡ್ಡಪ್ಪ, ರವಿ, ದೇವೇಂದ್ರಪ್ಪ, ವಿರೂಪಾಕ್ಷಪ್ಪ ಇತರರಿದ್ದರು.