ನೋಟಿಸ್ ನೀಡಿದ್ದಕ್ಕೆ ಬ್ಯಾಂಕ್ ಎದುರು ರೈತ ಸಂಘ ಪ್ರತಿಭಟನೆ

raita sanga manavi to minister
ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ರೈತನ ಸಾಲ ವಸೂಲಾತಿಗೆ ಕೆನರಾ ಬ್ಯಾಂಕ್‌ನವರು ದೌರ್ಜನ್ಯ ನಡೆಸುತ್ತಿದ್ದು ಮನೆ ಸ್ವಾಧೀನಕ್ಕೆ ನೋಟಿಸ್ ನೀಡಿರುವುದು ಅಕ್ಷೃಮವಾಗಿದೆ ಎಂದು ಆರೋಪಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬುಧವಾರ ಕುವೆಂಪು ರಸ್ತೆಯ ಬ್ಯಾಂಕ್‌ನ ಪ್ರಾದೇಶಿಕ ಕಚೇರಿ ಎದುರು ಧರಣಿ ನಡೆಸಿದರು.

ಶಿವಮೊಗ್ಗ ತಾಲೂಕು ಹೊಳೆಹಟ್ಟಿ ಗ್ರಾಮದ ಕುಪೇಂದ್ರಪ್ಪ ಎಂಬುವರು ಕೆನರಾ ಬ್ಯಾಂಕ್‌ನಲ್ಲಿ ಪಡೆದಿದ್ದ 9.52 ಲಕ್ಷ ರೂ. ಸಾಲದಲ್ಲಿ 4.50 ಲಕ್ಷ ರೂ. ಮರುಪಾವತಿ ಮಾಡಿದ್ದಾರೆ. ಉಳಿದ ಹಣ ಪಾವತಿಸಲು ಸಿದ್ಧರಾಗಿದ್ದಾರೆ. ಆದರೆ ಈ ನಡುವೆ ರೈತ ಮತ್ತು ಆತನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು ಮಕ್ಕಳ ಮದುವೆಗೆ ಜಮೀನು ಮಾರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬ್ಯಾಂಕ್‌ನವರು ಮನೆ ಸ್ವಾಧೀನಪಡಿಸಿಕೊಳ್ಳುವುದಾಗಿ ನೋಟಿಸ್ ಅಂಟಿಸಿದ್ದಾರೆ. ಇದರಿಂದ ರೈತನ ಕುಟುಂಬಸ್ಥರು ಭಯಭೀತರಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಈ ಬಗ್ಗೆ ಬ್ಯಾಂಕ್‌ಗೆ ಹೋಗಿ ಪರಿಶೀಲಿಸಿದರೆ 4.50 ಲಕ್ಷ ರೂ. ಸಾಲ ಮರು ಪಾವತಿಸಿದ್ದರೆ 5.02 ಲಕ್ಷ ರೂ. ಅಸಲು ಉಳಿದಿದೆ. ಈ ಹಣಕ್ಕೆ 1.01 ಕೋಟಿ ರೂ. ಬಾಕಿ ಇದೆ ಎಂದು ಬ್ಯಾಂಕ್‌ನವರು ತಿಳಿಸುತ್ತಾರೆ. ಇದೇನು ಮೀಟರ್ ಬಡ್ಡಿಯೇ, ಚಕ್ರಬಡ್ಡಿ ಹಾಕಲು ಬ್ಯಾಂಕ್‌ನವರಿಗೆ ಅಧಿಕಾರ ಇದೆಯೇ ಎಂದು ಪ್ರಶ್ನಿಸಿದರು.
ಬಳಿಕ ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೂ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾ ಗೌರವಾಧ್ಯಕ್ಷ ಈಶಣ್ಣ, ಜಿಲ್ಲಾಧ್ಯಕ್ಷ ಎಸ್.ಶಿವಮೂರ್ತಿ, ಜಿಲ್ಲಾ ಕಾರ್ಯಾಧ್ಯಕ್ಷರಾದ ಪಿ.ಡಿ ಮಂಜಪ್ಪ, ಕೆ.ರಾಘವೇಂದ್ರ, ಗ್ರಾಮಾಂತರ ಅಧ್ಯಕ್ಷ ಕಸಟ್ಟಿ ರುದ್ರೇಶ್, ಶಿವಮೊಗ್ಗ ತಾಲೂಕು ಅಧ್ಯಕ್ಷ ಸಿ.ಚಂದ್ರಪ್ಪ, ಭದ್ರಾವತಿ ತಾಲೂಕು ಅಧ್ಯಕ್ಷ ಜಿ.ಎನ್ ಪಂಚಾಕ್ಷರಪ್ಪ, ರೈತ ಕುಪ್ಪೇಂದ್ರಪ್ಪ, ಅವರ ಪತ್ನಿ ರಾಜೇಶ್ವರಿ, ಪುತ್ರ ಆದರ್ಶ ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net