ಘೋಷಣೆಯಿಂದ ರೈತರ ಹೊಟ್ಟೆ ತುಂಬದು: ವಿಜಯೇಂದ್ರ | Crop loss compensation delay

bjp mla b.y.vijayendra
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
Published on

ಬೆಂಗಳೂರು: ಅತಿವೃಷ್ಟಿ ಹಾಗೂ ಪ್ರವಾಹದಿಂದ ಉತ್ತರ ಕರ್ನಾಟಕದ ಜಿಲ್ಲೆಗಳು ತತ್ತರಿಸಿವೆ. ಮೊದಲ ಹಂತದ ಬೆಳೆ ಹಾನಿ ಜಂಟಿ ಸಮೀಕ್ಷೆಯಾಗಿದೆ. 5.29 ಹೆಕ್ಟೇರ್ ಬೆಳೆ ನಷ್ಟಕ್ಕೆ ಪರಿಹಾರ ಮೊತ್ತ ಪಾವತಿಸುತ್ತೇವೆ ಎಂದು ಸರ್ಕಾರ ಘೋಷಿಸಿದ ಮಾತ್ರಕ್ಕೆ ಸಂತ್ರಸ್ತ ರೈತರ ಹೊಟ್ಟೆ ತುಂಬುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಟುವಾಗಿ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಸಂಪುಟದ ಸಹೋದ್ಯೋಗಿಗಳಿಗೆ ಮುಖ್ಯಮಂತ್ರಿಗಳು ಔತಣ ಕೂಟ ಕರೆದಿದ್ದಾರೆ. ಔತಣ ಕೂಟದಲ್ಲಿ ರಾಜ್ಯದ ರೈತರ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಾರಾ ? ಎಂದು ಪ್ರಶ್ನಿಸಿದರು.

ತೀವ್ರ ಅತಿವೃಷ್ಟಿಯಿಂದ ರೈತರು ಅತ್ಯಂತ ಸಂಕಷ್ಟದಲ್ಲಿದ್ದಾರೆ. ಯಾದಗಿರಿ, ಗುಲ್ಬರ್ಗ ಜಿಲ್ಲೆಗಳ ರೈತರ ತೊಗರಿ ಮತ್ತಿತರ ಬೆಳೆ ಸುಮಾರು ಶೇ 70ರಿಂದ 90ರಷ್ಟು ನಾಶವಾಗಿದೆ. ಮನೆ ಕಳಕೊಂಡವರು ಕಾಳಜಿ ಕೇಂದ್ರದಲ್ಲಿ ಮಕ್ಕಳೊಂದಿಗೆ ಪರದಾಡುತ್ತಿದ್ದಾರೆ. ಅವರಿಗೆ ಶಾಶ್ವತ ನೆಲೆ ಸಿಕ್ಕಿಲ್ಲವೆಂದು ಕಳವಳ ವ್ಯಕ್ತಪಡಿಸಿದರು.

ಬಿಜೆಪಿ ಆಡಳಿತಾವಧಿಯಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕೊಪ್ಪಳ, ರಾಯಚೂರು ಮತ್ತಿತರ ಜಿಲ್ಲೆಗಳಲ್ಲಿ ಶಾಶ್ವತವಾಗಿ ಸೂರು ಕಲ್ಪಿಸಿ ಕೊಡುವ ಕೆಲಸ ಆಗಿದೆ ಎಂದು ಬಿ.ವೈ.ವಿಜಯೇಂದ್ರ ನೆನಪಿಸಿದರು.

ಆದರೆ ಬಾಧಿತ ಪ್ರದೇಶಕ್ಕೆ ಸ್ವತಃ ಪ್ರಿಯಾಂಕ್ ಖರ್ಗೆಯವರು ತೆರಳಿದ್ದಾಗ ಆ ಕ್ಷೇತ್ರದ ಮತದಾರರೇ ಶಾಶ್ವತ ಸೂರು ಕೊಡಿ ಎಂದು ಕೇಳಿದ್ದಾರೆ. ಕೃಷಿ ಸಚಿವರು, ಕಂದಾಯ ಸಚಿವರು ಬೆಂಗಳೂರಿನಲ್ಲಿ ಸಭೆ ಮಾಡಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಅಪಾರ ನಷ್ಟ

ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಅಲ್ಲ; ಕಲಬುರಗಿ ಜಿಲ್ಲೆಯಲ್ಲೇ ಆರರಿಂದ ಆರೂವರೆ ಲಕ್ಷ ಹೆಕ್ಟೇರ್ ನಷ್ಟು ಬೆಳೆ ಸಂಪೂರ್ಣ ನಾಶವಾಗಿದೆ ಎಂದರು.

ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಕನಿಷ್ಠ 25- 30 ಲಕ್ಷ ಹೆಕ್ಟೇರಿನಷ್ಟು ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಬಡ ರೈತರು ಮನೆ ಕಳಕೊಂಡಿದ್ದಾರೆ ಎಂದು ಗಮನ ಸೆಳೆದರು.

ಮುಖ್ಯಮಂತ್ರಿಗಳು ವೈಮಾನಿಕ ಸಮೀಕ್ಷೆ ಮಾಡಿ ಘೋಷಣೆ ಮಾಡಿದರೆ ರೈತರ ಹೊಟ್ಟೆ ತುಂಬುವುದೇ? ಸರ್ವೇ ಮಾಡುವುದು ಯಾವಾಗ? ಪರಿಹಾರ ಕೊಡುವುದು ಯಾವಾಗ? ಇಲಾಖಾ ಅಧಿಕಾರಿಗಳನ್ನೂ ಸಿಎಂ ಕಳುಹಿಸಿ ಕೊಡುತ್ತಿಲ್ಲ ಎಂದು ದೂರಿದರು.

ಹಿಂದೆ ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರ್ಜಾರ ಇದ್ದಾಗ ತ್ವರಿತವಾಗಿ ಪರಿಹಾರ ಕೊಟ್ಟಿದ್ದರು. ಯಡಿಯೂರಪ್ಪನವರು ಸಚಿವ ಸಂಪುಟ ವಿಸ್ತರಣೆ ಆಗದೇ ಏಕಾಂಗಿ ಆಗಿದ್ದರೂ ಬೆಳಗಾವಿ, ರಾಯಚೂರು, ಕೊಪ್ಪಳ- ಎಲ್ಲ ಜಿಲ್ಲೆಗಳಿಗೂ ಹೋಗಿ ರೈತರ ಸಮಸ್ಯೆಗೆ ಸ್ಪಂದಿಸಿದ್ದರು. ಶಾಶ್ವತ ನೆಲೆ ಕಲ್ಪಿಸುವ ಕೆಲಸ ಮಾಡಿದ್ದರು ಎಂದು ವಿವರಿಸಿದರು.

ನಮ್ಮ ಸರ್ಕಾರ ಇದ್ದಾಗ ರೈತ ಗೀತೆ ಘೋಷಿಸಿ ಸರಕಾರಿ ಆದೇಶ ಆಗಿತ್ತು. ಬೊಮ್ಮಾಯಿಯವರು ನೀಡಿದ ರೈತ ವಿದ್ಯಾನಿಧಿಯನ್ನೂ ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ರೈತರ ಬಗೆಗಿನ ಕಾಳಜಿ ಎಷ್ಟೆಂಬುದು ಜಗಜ್ಜಾಹೀರಾಗಿದೆ ಎಂದು ಆರೋಪಿಸಿದರು.

ಜಿಬಿಎ ಸಭೆಯ ಕಾರ್ಯಸೂಚಿಯನ್ನೇ ಶಾಸಕರಿಗೆ ಕಳುಹಿಸಿರಲಿಲ್ಲ; ಬೆಂಗಳೂರು ನಗರದಲ್ಲಿ ಏನು ಕಡಿದು ಕಟ್ಟೆ ಹಾಕಿದ್ದಾರೆ? ರಾಜ್ಯದಲ್ಲಿ ಕಳೆದೆರಡು ವರ್ಷದಲ್ಲಿ ಯಾವ ಅಭಿವೃದ್ಧಿ ಯೋಜನೆ ಘೋಷಿಸಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಕೇಳಿದರು.

ಮತದಾರರಿಗೆ ಅಪಮಾನ

ಡಿ.ಕೆ.ಶಿವಕುಮಾರ್ ಅವರು ಮಾಡಿದ ಅಪಮಾನವು ಮುನಿರತ್ನ ಅವರಿಗೆ ಮಾಡಿದ ಅಪಮಾನವಲ್ಲ; ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಮಾಡಿದ ಅಪಮಾನವಾಗಿದೆ ಎಂದರು.

ಬರುವ ದಿನದಲ್ಲಿ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಪಕ್ಷಕ್ಕೆ ಕರಿಟೋಪಿಯ ಬೆಲೆ ಏನೆಂದು ತೋರಿಸುತ್ತೇವೆ. ಒಬ್ಬ ಉಪ ಮುಖ್ಯಮಂತ್ರಿ, ಜವಾಬ್ದಾರಿಯುತ ಸಚಿವರಾಗಿ ಸಾರ್ವಜನಿಕ ಸ್ಥಳದಲ್ಲಿ ಹಾಗೂ ಒಬ್ಬ ಜನಪ್ರತಿನಿಧಿ ಬಗ್ಗೆ ಹೇಗೆ ನಡೆದುಕೊಳ್ಳಬೇಕು ಎಂಬ ಕನಿಷ್ಠ ಸೌಜನ್ಯವೂ ಡಿ.ಕೆ.ಶಿವಕುಮಾರ್ ಅವರಿಗೆ ಇಲ್ಲ ಎಂದು ಆಕ್ಷೇಪಿಸಿದರು.

ಅಧಿಕಾರ ಎಂಬುದು ಶಾಶ್ವತ ಅಲ್ಲ. ಡಿ.ಕೆ.ಶಿವಕುಮಾರ್ ಅವರ ಮಾತಿನ ನಡವಳಿಕೆ, ಮಾತಿನ ಧಾಟಿ, ಒಬ್ಬ ಚುನಾಯಿತ ಪ್ರತಿನಿಧಿಗೆ ಮಾಡಿದ ಅಪಮಾನದ ವಿರುದ್ಧ ಸಾರ್ವಜನಿಕರು ಮಾತನಾಡುತ್ತಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net