

ಸೊರಬ: ಅಡಕೆ ಬೆಳೆಗಾರರ ಹಿತ ಕಾಯುವಲ್ಲಿ ಮ್ಯಾಮ್ಕೋಸ್ ಸಂಸ್ಥೆ ಮುಂಚೂಣಿಯಲ್ಲಿದೆ ಎಂದು ಸಹಕಾರ ಭಾರತಿ ತಾಲೂಕು ಅಧ್ಯಕ್ಷ ಗಂಗಾಧರ್ ಹಿರೇಮಾಗಡಿ ಹೇಳಿದರು.
ಪಟ್ಟಣದ ಮುರುಘಾ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಹಕಾರ ಭಾರತಿ ಷೇರುದಾರರ ಸಮಾಲೋಚನೆ ಸಭೆಯಲ್ಲಿ ಮಾತನಾಡಿ, ರೈತರು ಅಡಕೆಯನ್ನು ಮನೆ ಬಾಗಿಲಲ್ಲಿ ಮಾರಾಟಮಾಡದೆ ಮ್ಯಾಮ್ಕೋಸ್ ಸಹಕಾರ ಸಂಘಗಳ ಮೂಲಕ ವ್ಯವಹರಿಸಿ ಉತ್ತಮ ಬೆಲೆ ಪಡೆದುಕೊಳ್ಳುವಂತೆ ತಿಳಿಸಿದರು.
ಮ್ಯಾಮ್ಕೋಸ್ ಉಪಾಧ್ಯಕ್ಷ ಮಹೇಶ್ ಮಾತನಾಡಿ, ತಾಲೂಕಿನಲ್ಲಿ 2023ರಲ್ಲಿ ಮ್ಯಾಮ್ಕೋಸ್ ಶಾಖೆ ತೆರೆಯಲಾಗಿದೆ. ಷೇರುದಾರರು ಅಡಕೆಯನ್ನು ನಮ್ಮ ಸಂಘದಲ್ಲಿ ಮಾರಾಟ ಮಾಡುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
1939ರಲ್ಲಿ ಮೂರು ಜಿಲ್ಲೆಗಳನ್ನೊಳಗೊಂಡು ಆರಂಭವಾದ ಮ್ಯಾಮ್ಕೋಸ್ ಇಂದು ಕೋಟ್ಯಂತರ ರೂ. ವಹಿವಾಟು ನಡೆಸುತ್ತಿದೆ. 30 ಸಾವಿರಕ್ಕೂ ಅಧಿಕ ಷೇರುದಾರರು ಠೇವಣಿ ಹೊಂದಿದ್ದು, ಇಲ್ಲಿಯವರೆಗೆ ಯಾವುದೇ ಹಣದ ಅವ್ಯವಹಾರ ನಡೆದಿಲ್ಲ. ಮ್ಯಾಮ್ಕೋಸ್ ಸಂಸ್ಥೆಯನ್ನು ಕಾಂಗ್ರೆಸ್ ತನ್ನ ಹಿಡಿತಕ್ಕೆ ಪಡೆಯಲು ಲಾಬಿ ನಡೆಸಿದರೂ ವಿಫಲವಾಗಿದೆ. ಸೈನಿಕರ ಸೇವೆ ಪರಿಗಣಿಸಿ ಸಂಸ್ಥೆಯಿಂದ ಸೈನಿಕ ನಿಧಿಗೆ 50 ಲಕ್ಷ ರೂ. ದೇಣಿಗೆ ನೀಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಡಾ. ಜ್ಞಾನೇಶ್ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ಪರ ನೈತಿಕ ಬೆಂಬಲ ವ್ಯಕ್ತಪಡಿಸಲು ಧರ್ಮದ ನಡೆ ಎನ್ನುವ ಅಭಿಯಾನವನ್ನು ಆ.23ರಂದು ಹಮ್ಮಿಕೊಳ್ಳಲಾಗಿದೆ ಎಂದರು.
ಸಹಕಾರ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ತಿಮ್ಮಪ್ಪ, ನಿರ್ದೇಶಕ ಕೀರ್ತಿರಾಜ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಚನ್ನವೀರಪ್ಪ ಗೌಡ, ತಾಲೂಕು ಪ್ರಧಾನ ಕಾರ್ಯದರ್ಶಿ ವಿಜೇಂದ್ರ ಗೌಡ, ಗೌರಮ್ಮ, ಸತೀಶ್, ಗಜಾನನ ರಾವ್, ರಾಜೇಂದ್ರ ನಾಯಕ್, ಪಾಣಿ ರಾಜಪ್ಪ, ಬಂಗಾರಸ್ವಾಮಿ, ಯೋಗೇಶ್ ಇದ್ದರು.