

ರಾಣೆಬೆನ್ನೂರ: ಸೀಗೆ ಹುಣ್ಣಿಮೆ ನಿಮಿತ್ತ ನಗರ ಸೇರಿ ತಾಲೂಕಿನಾದ್ಯಂತ ರೈತಾಪಿ ಕುಟುಂಬದವರು ಶುಕ್ರವಾರ ಜಮೀನಿನಲ್ಲಿ ವಿಶೇಷ ಪೂಜೆ ಸಲ್ಲಿಸಿ, ಚರಗಾ ಚಲ್ಲಿದರು.
ಬೆಳಗ್ಗೆಯಿಂದ ರೈತರು ತಮ್ಮ ಜೀವನಾಡಿ ಎತ್ತುಗಳ ಮೈತೊಳದು ಕೊಂಬಿಗೆ ಕೋಡಂಚು, ಮೈಗೆ ಜೂಲ್ಲಾ, ಕೊರಳಿಗೆ ಗೆಜ್ಜೆ ಕಟ್ಟಿ ಶೃಂಗರಿಸಿದರು. ಮಹಿಳೆಯರು ಹುಣ್ಣಿಮೆ ಆಚರಣೆಗೆ ಬೇಕಾದ ಗೋಧಿಹುಗ್ಗಿ, ನವನಕ್ಕಿ ಬುತ್ತಿ, ನಲ್ಲಕ್ಕಿ ಬುತ್ತಿ, ಎಳ್ಳು ರೊಟ್ಟಿ, ಚಪಾತಿ, ಮೊಸರನ್ನ, ಕಟ್ಟಿನ ಸಾಂಬಾರ್, ಮುಳಗಾಯಿ, ಹೆಸರುಕಾಳು, ವಟಾಣಿಕಾಳು ಪುಂಡಿ ಪಲ್ಯ, ಉಂಡಗಡಬು, ಶೇಂಗಾ ಚೆಟ್ನಿ, ಗುರಳ್ಳು ಚೆಟ್ನಿ, ಖರ್ಚಿಕಾಯಿ, ಕಡಗು, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ ಇತ್ಯಾದಿ ಖ್ಯಾದಿಗಳನ್ನು ತಯಾರಿಸಿ ದೇವಿಗೆ ನೈವಿಧ್ಯ ಸಲ್ಲಿಸಿದರು.
ಎಲ್ಲರೂ ಹೊಸ ಬಟ್ಟೆಯುಟ್ಟು ಕುಟುಂಬ ಸಮೇತ ತಮ್ಮ ಬಂಧು ಬಳಗದೊಂದಿಗೆ ಅಲಂಕರಿಸಿದ ಎತ್ತಿನ ಗಾಡಿಯಲ್ಲಿ, ಟ್ರ್ಯಾಕ್ಟರ್‌ಗಳಲ್ಲಿ ಇನ್ನು ಕೆಲವರು ಆಟೋಗಳಲ್ಲಿ ಹೊಲಕ್ಕೆ ತೆರಳಿ ಬನ್ನಿ ಹಾಗೂ ಬೇವಿನ ಮರಕ್ಕೆ ಹಸಿರು ಸೀರೆ, ಹಸಿರು ಬಳೆ ತೊಡಿಸಿ ಉಡಿ ತುಂಬಿ ಪೂಜೆ ಸಲ್ಲಿಸಿದರು.
ರೈತರು ಉತ್ತಮ ಬೆಳೆ ಬರಲಿ ಎಂದು ಪ್ರಾರ್ಥಿಸಿ ಹೊಲದ ಸುತ್ತಲೂ ಭೂ ತಾಯಿಗೆ ಚರಗಾ ಚಲ್ಲುವ (ಅನ್ನ ಪ್ರಸಾದವನ್ನು ಭೂತಾಯಿಗೆ ಅರ್ಪಿಸುವುದು) ಮೂಲಕ ಮೊದಲನೇ ತುತ್ತು ಭೂತಾಯಿಗೆ ಎನ್ನುವ ಸಂದೇಶ ಸಾರಿದರು. ಪೂಜೆ ಸಲ್ಲಿಸಿದ ನಂತರ ಒಬ್ಬರಿಗೊಬ್ಬರು ಸಂತಸದ ಮಾತುಗಳನ್ನಾಡುತ್ತ ಬಂಧುಗಳೊಂದಿಗೆ ಕುಳಿತು ಮನೆಯಿಂದ ತಂದಿದ್ದ ವಿವಿಧ ಬಗೆಯ ಪದಾರ್ಥಗಳೊಂದಿಗೆ ಸಂತಸದಿಂದ ಭರ್ಜರಿ ಭೋಜನ ಮಾಡಿದರು.