ರೈತರಿಗೆ ಅನ್ಯಾಯ ಖಂಡಿಸಿ ಶ್ರೀನಿವಾಸಪುರ ಬಂದ್​; ಫಸಲ್​ ಬಿಮಾ ಯೋಜನೆಯ ಹಣ ಬಾರದೆ ಸಂಕಷ್ಟ; ಬಂದ್​ ಯಶಸ್ವಿ

ಪ್ರತಿಭಟನಾಕಾರರ ಜತೆ ಸಂಧಾನಕ್ಕೆ ಕುಳಿತಿರುವ ವೃತ್ತ ನಿರೀಕ್ಷಕ ನಾರಾಯಣಸ್ವಾಮಿ.
ಪ್ರತಿಭಟನಾಕಾರರ ಜತೆ ಸಂಧಾನಕ್ಕೆ ಕುಳಿತಿರುವ ವೃತ್ತ ನಿರೀಕ್ಷಕ ನಾರಾಯಣಸ್ವಾಮಿ.
Published on

ಕೋಲಾರ/ಶ್ರೀನಿವಾಸಪುರ
ಪ್ರಧಾನಮಂತ್ರಿ ಫಸಲ್​ ಬಿಮಾ ಯೋಜನೆಯಡಿಯಲ್ಲಿ ರೈತರಿಗೆ ಆಗಿರುವ ಅನ್ಯಾಯವನ್ನು ಖಂಡಿಸಿ ಜಿಲ್ಲಾ ಮಾವು ಬೆಳೆಗಾರರ ಸಂದ ಜಂಟಿ ಹೋರಾಟ ಸಮಿತಿಯಿಂದ ಗುರುವಾರ ಶ್ರೀನಿವಾಸಪುರ ಪಟ್ಟಣವನ್ನು ಸಂಪೂರ್ಣ ಬಂದ್​ ಮಾಡಿ ಪ್ರತಿಭಟನೆ ನಡೆಸಲಾಯಿತು.

ಪ್ರಧಾನಮಂತ್ರಿ ಫಸಲ್​ ಬಿಮಾ ಯೋಜನೆಯಡಿಯಲ್ಲಿ ಮಾವು ಬೆಳೆಗಾರರು ವಿಮೆ ಪಾವತಿಸಿದ್ದು, ಕಳೆದ ವರ್ಷದಲ್ಲಿ ಅಕಾಲಿಕ ಮಳೆ, ಗಾಳಿ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಮಾವು ಬೆಳೆಗೆ ನಷ್ಟ ಉಂಟಾಗಿದ್ದರೂ ವಿಮಾ ಕಂಪನಿಯವರು ರೈತರ ನೆರವಿಗೆ ಬಾರದೆ ಇರುವುದನ್ನು ಖಂಡಿಸಿ ಮಾವು ಬೆಳೆಗಾರರ ಹೋರಾಟ ಸಮಿತಿ, ರೈತ ಸಂಟನೆ, ಕನ್ನಡಪರ ಹೋರಾಟಗಾರರು, ದಲಿತಪರ ಹೋರಾಟಗಾರರು ಸೇರಿದಂತೆ ವಿವಿಧ ಸಂಟನೆಗಳ ಮುಖಂಡರು ಗುರುವಾರ ಕರೆ ನೀಡಿದ್ದ ಬಂದ್​ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬಂದ್​ಗೆ ಸಹಕಾರ: ಬೆಳಗ್ಗೆಯಿಂದಲೇ ಬೀದಿಗಿಳಿದ ಹೋರಾಟಗಾರರು ಸಾರಿಗೆ ಸಂಚಾರ ತಡೆದರು. ಬಳಿಕ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್​ಗೆ ಸಹಕರಿಸುವಂತೆ ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್​, ಆಟೋಗಳು ಸಂಚಾರವನ್ನು ಸ್ಥಗಿತಗೊಳಿಸಿದವು. ಪಟ್ಟಣ ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಸಂಖ್ಯೆ ಕಡಿಮೆಯಿದ್ದ ಕಾರಣ ಕಚೇರಿಗಳು ಬಿಕೋ ಎನ್ನುತ್ತಿದ್ದವು. ಮುಂಜಾಗ್ರತೆ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು ಹಾಗೂ ಖಾಸಗಿ ಕಾಲೇಜುಗಳ ಕಿರು ಪರೀಕ್ಷೆಗಳನ್ನು ಮುಂದೂಡಲಾಯಿತು.

ಬೈಕ್​ ರ್ಯಾಲಿ: ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪಟ್ಟಣದ ವಿವಿಧ ವೃತ್ತಗಳಲ್ಲಿ ಬೈಕ್​ ರ್ಯಾಲಿ ನಡೆಸಿದರು. ತೋಟಗಾರಿಕಾ ಸಚಿವರು ಮತ್ತು ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವ ತನಕ ಬಂದ್​ ಮುಂದುವರಿಯುತ್ತದೆ ಎಂದು ಬಸ್​ ನಿಲ್ದಾಣದಲ್ಲಿ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ಧರಣಿ ನಡೆಸಿದರು.

ಡಿಸಿ ಆಗಮಿಸುವವರೆಗೂ ಪ್ರತಿಭಟನೆ: ಜಿಲ್ಲಾಧಿಕಾರಿ ಪರವಾಗಿ ವೃತ್ತನಿರೀಕ್ಷಕ ನಾರಾಯಣಸ್ವಾಮಿ ಹಾಗೂ ತಹಸೀಲ್ದಾರ್​ ಶರೀನ್​ತಾಜ್​ ಆಗಮಿಸಿ ಬಂದ್​ ಕೈಬಿಡುವಂತೆ ಮನವಿ ಮಾಡಿದರು. ಒಪ್ಪದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸುವವರೆಗೆ ಧರಣಿ ಕೈಬಿಡುವುದಿಲ್ಲ ಎಂದು ಬಸ್​ ನಿಲ್ದಾಣದಲ್ಲಿ ಪ್ರತಿಭಟನೆ ಮುಂದುವರಿಸಿದರು.

ವಿಮಾ ಕಂಪನಿಗಳೊಂದಿಗೆ ಸರ್ಕಾರ ಶಾಮೀಲು?: ಜಿಲ್ಲಾ ಮಾವು ಬೆಳೆಗಾರರ ಸಂದ ಅಧ್ಯಕ್ಷ ಚಿನ್ನಪ್ಪರೆಡ್ಡಿ ಪ್ರತಿಭಟನೆಯಲ್ಲಿ ಮಾತನಾಡಿ, ಫಸಲ್​ ಬಿಮಾ ಯೋಜನೆಯಡಿ ಸಾವಿರಾರು ರೈತರು ವಿಮಾ ಕಂತುಗಳನ್ನು ಪಾವತಿಸಿದ್ದರೂ ನಷ್ಟಕ್ಕೊಳ್ಳಗಾದ ರೈತರಿಗೆ ವಿಮಾ ಕಂಪನಿಯವರು ಪರಿಹಾರ ಹಣ ನೀಡಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಬಳಿ ಮನವಿ ಮಾಡಿದ್ದರೂ ಅವರು ರೈತರ ಬಗ್ಗೆ ಕಾಳಜಿ ವಹಿಸಲಿಲ್ಲ.

ಜಿಲ್ಲಾಧಿಕಾರಿಗಳಿಂದ ರೈತರ ಸಮಸ್ಯೆಗಳು ಬಗೆಹರಿಯುವುದಿಲ್ಲ, ಕಳೆದ ವರ್ಷ ಮಳೆ ಹಾಗೂ ಗಾಳಿಗೆ ಬೆಳೆ ನಷ್ಟವಾಗಿರುವ ಬಗ್ಗೆ ತಾಲೂಕು ಕಚೇರಿಯಿಂದ ವರದಿ ಸರ್ಕಾರಕ್ಕೆ ಹೋಗಿದೆ. ಸರ್ಕಾರ ಹಣ ಬಿಡುಗಡೆ ಮಾಡಿದ್ದರೂ ಇನ್ನು ಶೇ.40ರಷ್ಟು ರೈತರಿಗೆ ಪರಿಹಾರ ತಲುಪಿಲ್ಲ. ಫಸಲ್​ ಬಿಮಾ ಯೋಜನೆಗೆ ಹಣ ಪಾವತಿಸುವಂತೆ ರೈತರಿಗೆ ಸರ್ಕಾರವೇ ತಿಳಿಸಿ ವಿಮಾ ಕಟ್ಟಿದ ಬಳಿಕ ಈಗ ನಷ್ಟಕ್ಕೊಳಗಾಗಿರುವ ರೈತರಿಗೆ ಪರಿಹಾರ ಕೊಡಿಸಬೇಕಾದ ಜಿಲ್ಲಾಧಿಕಾರಿ ನುಣುಚಿಕೊಳ್ಳುತ್ತಿದ್ದಾರೆ.

ವಿಮಾ ಕಂಪನಿಗಳವರನ್ನು ಕೇಳಿದರೆ ಮಳೆ ಹಾಗೂ ಗಾಳಿಯಿಂದ ನಷ್ಟಕ್ಕೊಳಗಾಗಿರುವ ವರದಿ ನಮ್ಮ ಕೈ ಸೇರಿಲ್ಲ ಎನ್ನುತ್ತಿದ್ದಾರೆ. ಜಿಲ್ಲಾಧಿಕಾರಿಗಳು ತಾಲೂಕುಗಳಿಂದ ವರದಿ ತರಿಸಿಕೊಂಡು ಸರ್ಕಾರಕ್ಕೆ ಕಳುಹಿಸಿದ್ದರೂ ವಿಮಾ ಕಂಪನಿಗಳು ಇಲ್ಲ ಎನ್ನುತ್ತಿದ್ದಾರೆ. ಇದರಲ್ಲಿ ಸರ್ಕಾರವು ಶಾಮೀಲಾಗಿದೆ ಎಂದು ಆರೋಪಿಸಿದರು.

ಬಂದ್​ನಿಂದಾಗಿ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಬಸ್​ಗಳ ಸಂಚರಿಸದೇ ಬಿಕೋ ಎನ್ನುತ್ತಿರುವುದು.
ಬಂದ್​ನಿಂದಾಗಿ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಬಸ್​ಗಳ ಸಂಚರಿಸದೇ ಬಿಕೋ ಎನ್ನುತ್ತಿರುವುದು.

ಮಾತಿನ ಚಕಮಕಿ: ಬೆಳಗ್ಗೆ ಕೆಎಸ್​ಆರ್​ಟಿಸಿ ಬಸ್​ ರಸ್ತೆಗಿಳಿದಾಗ ಪ್ರತಿಭಟನಾಕಾರರು ಕೆಎಸ್​ಆರ್​ಟಿಸಿ ಘಟಕಕ್ಕೆ ಮುತ್ತಿಗೆ ಹಾಕಿ ಬಸ್​ ಸಂಚಾರವನ್ನು ರದ್ದುಪಡಿಸಬೇಕೆಂದಾಗ ಸಿಬ್ಬಂದಿ ಹಾಗೂ ರೈತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಳಿಕ ಕೆಎಸ್​ಆರ್​ಟಿಸಿ ಬಸ್​ ಸಂಚಾರ ಸ್ಥಗಿತಗೊಂಡಿತು.

ತಹಸೀಲ್ದಾರ್​ ಭರವಸೆ ಬಳಿಕ ಬಂದ್​ ವಾಪಸ್​
ರೈತರ ಬಂದ್​ ಸಂಜೆವರೆಗೆ ಮುಂದುವರಿದರೂ ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾಧಿಕಾರಿ ಬರದೇ ಕಚೇರಿ ಸಿಬ್ಬಂದಿಯನ್ನು ಮನವಿ ಸ್ವೀಕರಿಸಲು ಕಳುಹಿಸಿದ್ದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಆಕ್ರೋಶಗೊಂಡು ಸಿಬ್ಬಂದಿಗೆ ಮನವಿ ನೀಡದೆ ಜಿಲ್ಲಾಧಿಕಾರಿಗಳ ವಿರುದ್ಧ ಗರ್ಂ ಆದರು. ತಹಸೀಲ್ದಾರ್​ ಶರೀನ್​ತಾಜ್​ ಅವರಿಗೆ ಮನವಿ ನೀಡಿದರು.

ವಿಮಾ ಕಂಪನಿಗಳನ್ನು ಕರೆಸಿ ರೈತರೊಂದಿಗೆ ಸಭೆ ನಡೆಸುವುದಾಗಿ ತಹಸೀಲ್ದಾರ್​ ಶರೀನಾತಾಜ್​ ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಸಂಜೆ 6ಕ್ಕೆ ಬಂದ್​ ವಾಪಸ್​ ಪಡೆದರು.

ಮಾವು ಬೆಳೆಗಾರರ ಹೋರಾಟ ಸಮಿತಿ ಕಾರ್ಯದರ್ಶಿ ನವೀನ್​ ಕುಮಾರ್​, ಖಜಾಂಚಿ ಬೆಲ್ಲಂ ಶ್ರೀನಿವಾಸರೆಡ್ಡಿ, ಹಸಿರು ಸೇನೆಯ ತಾಲೂಕಾಧ್ಯಕ್ಷ ಶ್ರೀರಾಮರೆಡ್ಡಿ, ಕಾರ್ಯದರ್ಶಿ ನಾರಾಯಣಸ್ವಾಮಿ, ಪದಾಧಿಕಾರಿಗಳಾದ ಶ್ರೀಧರ್​, ಹೆಬ್ಬಟ ರಮೇಶ್​, ರೈತ ಮುಖಂಡರಾದ ವೀರಪ್ಪರೆಡ್ಡಿ, ಕೊಟ್ರಗುಳಿ ವೆಂಕಟರಾಮರೆಡ್ಡಿ, ಒಕ್ಕಲಿಗರ ಸಂದ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಬೈಚೇಗೌಡ ಹಾಗೂ ವಿವಿಧ ಸಂಟನೆಯ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net