

ಶಿವಮೊಗ್ಗ: ರೈತರ ಸಾಗುವಳಿ ಜಮೀನಿನ ಹಕ್ಕುಪತ್ರ ವಜಾಗೊಳಿಸಿರುವುದನ್ನು ವಿರೋಧಿಸಿ ಮಲೆನಾಡು ರೈತರ ಹೋರಾಟ ಸಮಿತಿ ಮತ್ತು ಗೋರ ಸೇನಾ ಸಂಘಟನೆ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನಾ.ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು, ನಮ್ಮ ಜಮೀನುಗಳಿಗೆ ಹಕ್ಕುಪತ್ರಗಳನ್ನು ಕೊಟ್ಟಿದ್ದರೂ ಈಗ ಅದನ್ನು ವಜಾ ಮಾಡಿದ್ದಾರೆ. ಇದು ರೈತ ವಿರೋಧಿ ನೀತಿ. ರೈತರಿಗೆ ಭೂ ಹಕ್ಕು ನೀಡಬೇಕು ಎಂದು ಆಗ್ರಹಿಸಿದರು.
ಕುಂಚೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸರ್ವೇ ನಂ. 82, 99, 43 ಹಾಗೂ ಬೀರನಕೆರೆ ವ್ಯಾಪ್ತಿಯ 45, 102ರಲ್ಲಿ ಕಳೆದ 50 ವರ್ಷಗಳಿಂದ 110ಕ್ಕೂ ಹೆಚ್ಚು ಕುಟುಂಬಗಳು ಬಗರ್‌ಹುಕುಂ ಸಾಗುವಳಿ ಮಾಡುತ್ತ ಬಂದಿದ್ದಾರೆ. ಅವರಿಗೆ 2023ರಲ್ಲಿ ಹಕ್ಕುಪತ್ರ ಕೊಡಲಾಗಿತ್ತು. ಆದರೆ ಈಗ ಹಕ್ಕುಪತ್ರ ಮತ್ತು ಪಹಣಿಯನ್ನು ವಜಾ ಮಾಡಲಾಗಿದೆ. ಕೂಡಲೇ ಮರಳಿ ಹಕ್ಕುಪತ್ರ ನೀಡಬೇಕು ಎಂದು ರೈತರು ಆಗ್ರಹಿಸಿದರು.
ಬಡ ರೈತರನ್ನು ಭೂ ಹಕ್ಕಿನಿಂದ ವಂಚಿಸಬಾರದು. ತಕ್ಷಣವೇ ಹಕ್ಕುಪತ್ರ ನೀಡಬೇಕು ಎಂದು ಗೋರ ಸೇನಾ ತಾಲೂಕು ಘಟಕದ ಮುಖಂಡರು ಆಗ್ರಹಿಸಿದರು. ಮಲೆನಾಡು ರೈತ ಹೋರಾಟ ಸಮಿತಿ ಪ್ರಮುಖರಾದ ನಾಗೇಶ್‌ನಾಯ್ಕ, ಚಂದ್ರಾನಾಯ್ಕಾ, ವಿನಾಯಕ, ಕೃಷ್ಣಾನಾಯ್ಕಾ, ಸಂತೋಷ್‌ನಾಯ್ಕ, ಹನುಮ ನಾಯ್ಕ, ಮಂಜುನಾಯ್ಕ, ಶಿವಾಜಿನಾಯ್ಕ, ಹಾಗೂ ಗೋರ ಸೇನಾದ ಪ್ರಮುಖರಾದ ಜಿ. ಚಂದ್ರಾನಾಯ್ಕಾ, ಸಂತೋಷ್ ಇತರರಿದ್ದರು.