

ಬೆಂಗಳೂರು: ರೈತರ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಮಂಗಳವಾರ ‘ಬೆಂಗಳೂರು ಚಲೋ’ ನಡೆಸಿ ಫ್ರೀಡಂ ಪಾರ್ಕ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಕುರುಬೂರು ಶಾಂತಕುಮಾರ್ ಮಾತನಾಡಿ, ತೆಲಂಗಾಣ ಮಾದರಿಯಲ್ಲಿ ರಾಜ್ಯದಲ್ಲೂ ರೈತರ ಸಾಲಮನ್ನಾ ಮಾಡಬೇಕು. ತಮಿಳುನಾಡಿಗೆ ನೀರು ಹರಿಸಿದ್ದರಿಂದ ಕಾವೇರಿ ನದಿ ಜಲನಯನ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಹೀಗಾಗಿ ರೈತರಿಗೆ ಎಕರೆಗೆ ಕನಿಷ್ಠ ೨೫ ಸಾವಿರ ರೂ. ಪರಿಹಾರ ನೀಡಬೇಕು. ಬಗರ್ ಹುಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ನೀಡುವುದು ಸೇರಿ ಹಲವು ಬೇಡಿಕೆಗಳನ್ನು ಮುಂದಿನ ಬಜೆಟ್‌ನಲ್ಲಿ ಘೋಷಿಸುವಂತೆ ಆಗ್ರಹಿಸಿದರು.
ಹಳ್ಳಿಗಳಲ್ಲಿ ರೈತರು ಕೃಷಿ ತೊರೆದು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಆತ್ಮಹತ್ಯೆಗಳ ಸರಣಿ ಹೆಚ್ಚುತ್ತಿದೆ. ಬರಗಾಲ ಕಾಡುತ್ತಿದೆ. ಕೃಷಿ ದುರ್ಬಲವಾಗುತ್ತಿದೆ. ರೈತರ ಮಕ್ಕಳ ಮದುವೆಯಾಗಲು ಹೆಣ್ಣುಮಕ್ಕಳು ಒಪ್ಪುತ್ತಿಲ್ಲ. ಈ ಎಲ್ಲವನ್ನೂ ಪರಿಗಣಿಸಿ ಸರ್ಕಾರ ರೈತರ ಸಾಲವನ್ನು ಮನ್ನಾ ಮಾಡಲೇಬೇಕು. ಕಾಂಗ್ರೆಸ್ ಸರ್ಕಾರವೇ ತೆಲಂಗಾಣದಲ್ಲಿ ರೈತರ ಸಾಲ ಮನ್ನ ಮಾಡಿರುವಾಗ ಕರ್ನಾಟಕದಲ್ಲಿ ಏಕೆ ಇದು ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು. ಬಜೆಟ್‌ನಲ್ಲಿ ರೈತರಿಗೆ ಹೆಚ್ಚಿನ ಅನುದಾನ ಕೊಡಲೇಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯಕ್ಕೆ ಬಿಡುಗಡೆಯಾಗಬೇಕಾದ ಅನುದಾನ ಬಿಡುಗಡೆ ವಿಚಾರದಲ್ಲಿ ಕೆಸರೆರಾಚಾಟ ಆಡುತ್ತಾ, ರೈತರ ಬಗ್ಗೆ ಮೂಸಳೆ ಕಣ್ಣಿರು ಸುರಿಸುತಿವೆ. ಕಳೆದ ಹತ್ತು ವರ್ಷದಲ್ಲಿ ಕೃಷಿ ಕ್ಷೇತ್ರಕ್ಕೆ ಬಿಡುಗಡೆಯಾಗಿರುವ ಅನುದಾನ, ಖರ್ಚು ಮಾಡಿರುವ ಅನುದಾನ ಎಷ್ಟು ಎಂದು ಎರಡು ಸರ್ಕಾರಗಳು ಶ್ವೇತಪತ್ರ ಬಿಡುಗಡೆ ಮಾಡಲಿ ಆಗ ರೈತರಿಗೆ ನಿಜ ಬಣ್ಣ ಬಯಲಾಗುತ್ತದೆ. ರೈತರಿಗೆ ಕನಿಕರ ಬೇಕಾಗಿಲ್ಲ ನೈಜ ಪರಿಹಾರ ಬೇಕು. ಜತೆಗೆ ಗ್ರೀನ್ ಬರ್ಡ್ಸ್ ಕಂಪನಿಯಿಂದ ವಂಚಿತ ಠೇವಣಿದಾರರಿಗೆ ತುರ್ತಾಗಿ ಹಣ ಕೊಡಿಸಬೇಕು ಎಂದು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಪ್ರತಿಭಟನಾ ಸ್ಥಳಕ್ಕೆ ಸಚಿವ ಡಿ.ಸುಧಾಕರ್ ಆಗಮಿಸಿ ಪ್ರತಿಭಟನಾಕಾರರ ಒತ್ತಾಯ ಪತ್ರ ಸ್ವೀಕರಿಸಿದರು. ಬಳಿಕ ಮಾತನಾಡಿ ಅವರು, ಮುಖ್ಯಮಂತ್ರಿಗಳು ದೆಹಲಿಗೆ ಹೋಗಿದ್ದಾರೆ. ದೆಹಲಿಯಲ್ಲಿ ಬುಧವಾರ ಈ ಒತ್ತಾಯಗಳ ವಿಚಾರವನ್ನು ಅವರ ಗಮನಕ್ಕೆ ತರುತ್ತೇನೆ. ಸಮಯವಕಾಶ ಸಿಕ್ಕರೆ ಮುಖಂಡರನ್ನು ಆಹ್ವಾನಿಸಿ ಚರ್ಚಿಸಲಾಗುವುದು ಎಂದರು.
ಗ್ರೀನ್ ಬರ್ಡ್ಸ್ ಠೇವಣಿದಾರರ ಹಣ ಕೊಡಿಸಲು ಎರಡು ದಿನದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಂದ ಅಧಿಕಾರಿಗಳಿಗೆ ಸೂಚನೆ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.