ಐಪಿ ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆಗೆ ವಿರೋಧಿಸಿ ರೈತರ ಪ್ರತಿಭಟನೆ

raita sanga protest
ಐಪಿ ಸೆಟ್‌ಗಳಿಗೆ ಆಧಾರ್‌ಕಾರ್ಡ್ ಜೋಡಣೆ ಕ್ರಮ ವಿರೋಧಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ರೈತ ಸಂಘದಿಂದ ಮನವಿ ಸಲ್ಲಿಸಲಾಯಿತು. ಎಚ್.ಆರ್.ಬಸವರಾಜಪ್ಪ, ಹಿಟ್ಟೂರು ರಾಜು, ಕೆ.ರಾಘವೇಂದ್ರ, ಇ.ಬಿ.ಜಗದೀಶ್, ಮಂಜಪ್ಪ ಕಾಚಿಕೊಪ್ಪ, ಎಂ.ಡಿ.ನಾಗರಾಜ, ಗುರುಶಾಂತಪ್ಪ, ಕಸಟ್ಟಿ ರುದ್ರೇಶ್, ಜಿ.ಎನ್.ಪಂಚಾಕ್ಷರಿ, ಹನುಮಂತಪ್ಪ, ಸಿ.ಚಂದ್ರಪ್ಪ, ಜ್ಞಾನೇಶ್ ಇದ್ದರು.
Published on

ಶಿವಮೊಗ್ಗ: ಐಪಿ ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಣೆಯ ಕ್ರಮ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನೇತೃತ್ವದಲ್ಲಿ ರೈತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು.

ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೆ ರೈತರು ಐಪಿ ಸೆಟ್‌ಗಳನ್ನು ಉಪಯೋಗಿಸುತ್ತಲೇ ಬಂದಿದ್ದಾರೆ. 10 ಎಚ್‌ಪಿವರೆಗಿನ ಐಪಿ ಸೆಟ್‌ಗಳಿಗೆ ವಿದ್ಯುಚ್ಛಕ್ತಿ ದರ ಇರುವುದಿಲ್ಲ. ಆದರೂ ಐಪಿ ಸೆಟ್‌ಗಳಿಗೆ ಆಧಾರ್ ಕಾರ್ಡ್ ಜೋಡಿಸಬೇಕೆಂಬ ನಿಯಮ ಮಾಡಿರುವುದರ ಉದ್ದೇಶವೇನು ಎಂದು ಪ್ರಶ್ನಿಸಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಮಾತನಾಡಿ, ಆಧಾರ್ ಜೋಡಣೆ ಹಿಂದೆ ವಿದ್ಯುಚ್ಛಕ್ತಿ ಖಾಸಗೀಕರಣದ ಹುನ್ನಾರ ಅಡಗಿದೆ. ಕೇಂದ್ರ ಸರ್ಕಾರ ಹಿಂದಿನ ಲೋಕಸಭೆಯಲ್ಲಿ ಖಾಸಗೀಕರಣ ಮಾಡುವ ಮಸೂದೆಯನ್ನು ಮಂಡಿಸಿ ಸದನ ಸಮಿತಿಗೆ ಕಳುಹಿಸಿತ್ತು. ರಾಜ್ಯ ಸರ್ಕಾರ ಆಡಳಿತಕ್ಕೆ ಬರುವ ಮುನ್ನ ವಿದ್ಯುಚ್ಛಕ್ತಿಯನ್ನು ಖಾಸಗೀಕರಣ ಮಾಡುವುದಿಲ್ಲ ಎಂದು ಭರವಸೆ ನೀಡಿತ್ತು. ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ ಸರ್ಕಾರಗಳು ವಿದ್ಯುಚ್ಛಕ್ತಿ ಖಾಸಗೀಕರಣ ಮಾಡುವುದಿಲ್ಲ ಎಂದು ವಿಧಾನಸಭೆಯಲ್ಲಿ ನಿರ್ಣಯ ಮಾಡಿ ಕೇಂದ್ರಕ್ಕೆ ಕಳುಹಿಸಿದೆ. ಅದೇ ರೀತಿ ರಾಜ್ಯ ಸರ್ಕಾರವು ಕೂಡ ಕಳುಹಿಸಬೇಕು ಎಂದು ಒತ್ತಾಯಿಸಿದರು.
ಕೆಲ ರೈತರದ್ದು ಪಹಣಿ ಖಾತೆ ಇಲ್ಲದ ಕಾರಣ ಆರ್‌ಆರ್ ನಂಬರ್ ಸಿಕ್ಕಿರುವುದಿಲ್ಲ. ಇಂತಹ ರೈತರಿಗೆ ಆಧಾರ್‌ಕಾರ್ಡ್ ನೋಂದಣಿ ಸಹ ಆಗುವುದಿಲ್ಲ. ಕರ್ನಾಟಕದಲ್ಲಿ 25 ಲಕ್ಷಕ್ಕೂ ಹೆಚ್ಚಿಗೆ ಐಪಿ ಸೆಟ್‌ಗಳಿವೆ. ಅಕ್ರಮ ಸಕ್ರಮ ಯೋಜನೆಯಡಿ ಹಣ ಕಟ್ಟಿಸಿಕೊಂಡು ಈ ಹಿಂದೆ ಆರ್‌ಆರ್ ನಂಬರ್ ಕೊಡುತ್ತಿದ್ದರು. ಈಗ ಅದನ್ನು ನಿಲ್ಲಿಸಿದ್ದಾರೆ ಎಂದು ದೂರಿದರು.
ಸ್ವಯಂ ವೆಚ್ಚ ಯೋಜನೆಯನ್ನು ಜಾರಿಗೆ ತಂದಿರುವುದರಿಂದ ರೈತರು ಐಪಿ ಸೆಟ್‌ಗಾಗಿ 3ರಿಂದ 4ಲಕ್ಷ ರೂ. ಬಂಡವಾಳ ಹೂಡಲು ಸಾಧ್ಯವಿಲ್ಲ. ವಿನಾಕಾರಣ ಆಧಾರ್ ಕಾರ್ಡ್ ಜೋಡಣೆ ಮಾಡುವ ಕ್ರಮ ರೈತರಿಗೆ ತೊಂದರೆ ಕೊಡುವ ಉದ್ದೇಶವೇ ಆಗಿದೆ. ಆದ್ದರಿಂದ ಕೂಡಲೇ ಇದನ್ನು ರದ್ದು ಮಾಡಬೇಕು ಮತ್ತು ರೈತರು ಯಾವುದೇ ಕಾರಣಕ್ಕೂ ಆಧಾರ್ ಕಾರ್ಡ್‌ನ್ನು ವಿದ್ಯುಚ್ಛಕ್ತಿ ಇಲಾಖೆಗೆ ಕೊಡಬಾರದು ಎಂದು ತಿಳಿಸಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಇ.ಬಿ.ಜಗದೀಶ್, ಜಿಲ್ಲಾ ಹಸಿರು ಸೇನೆ ಸಂಚಾಲಕ ಎಂ.ಡಿ.ನಾಗರಾಜ, ಜಿಲ್ಲಾ ಕಾರ್ಯದರ್ಶಿ ಗುರುಶಾಂತಪ್ಪ, ಗ್ರಾಮಾಂತರ ಅಧ್ಯಕ್ಷ ಕಸಟ್ಟಿ ರುದ್ರೇಶ್, ಭದ್ರಾವತಿ ತಾಲೂಕು ಅಧ್ಯಕ್ಷ ಜಿ.ಎನ್.ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಶಿವಮೊಗ್ಗ ತಾಲೂಕು ಅಧ್ಯಕ್ಷ ಸಿ.ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಜ್ಞಾನೇಶ್, ಮಂಜಪ್ಪ ಕಾಚಿಕೊಪ್ಪ ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net