ಸರ್ವೇ ಕಾರ್ಯಕ್ಕೆ ರೈತರ ವಿರೋಧ

01
Published on

ಬೈಲಕುಪ್ಪೆ: ಒತ್ತುವರಿಯಾಗಿದೆ ಎಂದು ಆರೋಪಿಸಿ ಕಾವೇರಿ ನದಿ ದಡದಲ್ಲಿರುವ ಕೆಲ ಜಮೀನುಗಳನ್ನು ಅಳತೆ ಮಾಡುವ ಮೂಲಕ ಸರ್ವೇ ಅಧಿಕಾರಿಗಳು ನಮಗೆ ತೊಂದರೆ ಕೊಡುತ್ತಿದ್ದಾರೆ ಎಂದು ಮುತ್ತಿನ ಮುಳುಸೋಗೆ ಗ್ರಾಮದ ಜೆಡಿಎಸ್ ಮುಖಂಡ ಎಂ.ಎನ್.ಚಂದ್ರಶೇಖರ್ ಆಪಾದಿಸಿದರು.

ಸರ್ವೇ ಕಾರ್ಯಕ್ಕೆ ಅಧಿಕಾರಿಗಳು ಆಗಮಿಸಿದ್ದಾಗ ಸರ್ವೇ ಕಾರ್ಯಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾವೇರಿ ನದಿ ಪ್ರವಾಹ ಬಂದಾಗ ನದಿ ದಡದಲ್ಲಿರುವ ಕಣಗಾಲ್‌ನಿಂದ ಕೊಪ್ಪ ರಾಣಿಗೇಟ್ ಅಕ್ಕಪಕ್ಕದ ಜಮೀನುಗಳಲ್ಲಿ ಬೆಳೆ ಕೊಚ್ಚಿಹೋಗಿ ರೈತರು ಕಂಗಾಲಾಗಿದ್ದಾರೆ.

ಇದನ್ನು ಗಮನಿಸದ ಕಂದಾಯ ಅಧಿಕಾರಿಗಳು ಮುತ್ತಿನ ಮುಳುಸೋಗೆ ಗ್ರಾಮಕ್ಕೆ ಆಗಮಿಸಿ ನದಿ ದಡದ ಕೆಲವರ ಜಮೀನುಗಳಲ್ಲಿ ಮಾತ್ರ ಸರ್ವೇ ನಡೆಸಿ ತೆರವುಗೊಳಿಸಿ ಅರಣ್ಯ ಇಲಾಖೆಗೆ ವಹಿಸಿ ಸಸಿ ನೆಡೆಸುತ್ತೇವೆ ಎಂದಿದ್ದಾರೆ. ಹಾಗಾದರೆ ಇಡೀ ತಾಲೂಕಿನ ನದಿ ದಡದಲ್ಲಿರುವ ಎಲ್ಲ ರೈತರ ಒತ್ತುವರಿಯಾಗಿರುವ ಜಮೀನನ್ನು ತೆರವುಗೊಳಿಸಿ ವಶಪಡಿಸಿಕೊಳ್ಳಲಿ ನೋಡೋಣ ಎಂದು ಪ್ರಶ್ನಿಸಿದರು.

ಉದ್ದೇಶಪೂರ್ವಕವಾಗಿ ನಮ್ಮ ಗ್ರಾಮದ ರೈತರಿಗೆ ತೊಂದರೆ ಕೊಡುವುದು ನಿಲ್ಲಿಸಬೇಕು. ಇದೇ ರೀತಿ ತೊಂದರೆ ಕೊಟ್ಟರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಮುಂದೆ ಉಗ್ರ ಪ್ರತಿಭಟನೆಗೆ ನಡೆಸುವುದಾಗಿ ಎಚ್ಚರಿಸಿದರು.
ಸ್ಥಳದಲ್ಲೇ ಇದ್ದ ಶಿರಸ್ತೇದಾರ್ ವಿನೋದ್ ಮಾತನಾಡಿ, ನದಿ ದಡದಲ್ಲಿ ಒತ್ತುವರಿ ತೆರವಿಗಾಗಿ ಬಂದಿದ್ದು ಸರ್ವೇ ನಂ.54ರಿಂದ 65 ರವರೆಗೆ ಸರ್ವೇ ಕಾರ್ಯ ನಡೆದಿದೆ. ಸರ್ವೇ ನಂ.60 ಮಾತ್ರ ಉಚ್ಚ ನ್ಯಾಯಾಲಯಲ್ಲಿ ತಡೆಯಾಜ್ಞೆ ಇದೆ ಎಂದು ರೈತರು ನಮಗೆ ನಕಲನ್ನು ತಲುಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಂತರ ಸರ್ವೇ ಕಾರ್ಯಕ್ಕೆ ಆಗಮಿಸಿದ್ದ ಶಿರಸ್ತೇದಾರ್ ವಿನೋದ್ ಹಾಗೂ ಸಿಬ್ಬಂದಿ ಸರ್ವೇ ಕಾರ್ಯ ಕೈ ಬಿಟ್ಟು ತೆರಳಿದರು. ಆರ್.ಐ.ನಂದೀಶ್, ಗ್ರಾಮ ಲೆಕ್ಕಾಧಿಕಾರಿಗಳಾದ ಸುನಿಲ್, ನವೀನ್, ಪ್ರದೀಪ್, ಬೆಟ್ಟದಪುರ ಪೊಲೀಸ್ ಠಾಣಾಧಿಕಾರಿ ಪಿ.ಲೋಕೇಶ್, ಸಿಬ್ಬಂದಿ ಮಂಜು, ರೈತರಾದ ಶಿವಕುಮಾರ್, ರವಿ, ಮಂಜುನಾಥ್, ಚಂದ್ರಶೇಖರ್, ಕುಮಾರ್ ಮತ್ತಿತರರಿದ್ದರು.
 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net