

ಮೈಸೂರು: ದೇಶದ ಒಟ್ಟಾರೆ ಜಿಡಿಪಿಗೆ ಅನ್ನದಾತರು ಶೇ.20ರಿಂದ ಶೇ.25ರವರೆಗೆ ಕೊಡುಗೆ ನೀಡುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಹಮ್ಮಿಕೊಂಡಿದ್ದ ಕೃಷಿ ಮೇಳದಲ್ಲಿ ಅಂದಾಜು 2 ಲಕ್ಷಕ್ಕಿಂತ ಹೆಚ್ಚಿನ ಜನರು ಆಗಮಿಸಿ ಮಾಹಿತಿಗಳನ್ನು ಪಡೆದುಕೊಂಡಿದ್ದರು. ಈ ಬಾರಿ ಮೇಳದಲ್ಲಿ ಹೆಚ್ಚಿನ ಜನರು ಆಗಮಿಸಿ ಉಪಯುಕ್ತ ಮಾಹಿತಿ ಪಡೆದುಕೊಳ್ಳಬೇಕೆಂಬು ನಮ್ಮ ಉದ್ದೇಶವಾಗಿದೆ ಎಂದು ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ ಹೇಳಿದ್ದಾರೆ.
ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ ‘ಸುಸ್ಥಿರ ಅಭಿವೃದ್ಧಿ ನಮ್ಮ ಗುರಿ’ ಪರಿಕಲ್ಪನೆಯಡಿ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ‘ಕೃಷಿ ಮೇಳ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರು ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಪ್ರತಿ ನಿತ್ಯ ಮೂರು ಹೊತ್ತು ಊಟ ಮಾಡುವುದಕ್ಕೆ, ಮೈತುಂಬ ಬಟ್ಟೆ ಹಾಕಿಕೊಳ್ಳುವುದಕ್ಕೆ ರೈತರು ಕಾರಣ. ರೈತರು ಇಲ್ಲ ಅಂದರೆ ನಾವಿಲ್ಲ. ಕೃಷಿ ಮೇಳಕ್ಕೆ ಸಹಕರಿಸಿದ ರಾಜ್ಯದ ಹೆಮ್ಮೆಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಹೇಳಿದರು.
ನಾವು ಹಲವು ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ. ಪ್ರಾಪರ್ಟಿ ಎಕ್ಸ್ಪೋ, ಎಜುಕೇಷನ್ ಎಕ್ಸ್ಪೋ, ಆಟೋಮೊಬೈಲ್ ಎಕ್ಸ್‌ಪೋನಂತಹ ಹಲವು ಮೇಳವನ್ನು ಮಾಡಲಾಗಿದೆ. ಆದರೆ, ಕೃಷಿಮೇಳ ಎಲ್ಲ ಮೇಳಕ್ಕಿಂತ ವಿಭಿನ್ನವಾದದ್ದು. ಹೀಗಾಗಿ, ಅನ್ನದಾತರಿಗೆ ನಮ್ಮ ಕುಟುಂಬದ ವತಿಯಿಂದ ಸಣ್ಣ ಸಹಾಯ. ರೈತರು ಸೇರಿ ಹೆಚ್ಚಿನ ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡಬೇಕೆಂದು ಮನವಿ ಮಾಡಿದರು.