ಸಿಎಂ ಕ್ಷೇತ್ರದಲ್ಲಿ ರೈತರ ಜಮೀನು ಸರ್ವೇ : ಆತಂಕದಲ್ಲಿ ರೈತರು

ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ರೈತರ ಜಮೀನು ಸರ್ವೇಗೆ ನಡೆಸಿದಾಗ ರೈತರು ವಿರೋಧಿಸಿದರು.
ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮಂಗಳವಾರ ರೈತರ ಜಮೀನು ಸರ್ವೇಗೆ ನಡೆಸಿದಾಗ ರೈತರು ವಿರೋಧಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಎಂ ಕ್ಷೇತ್ರದಲ್ಲಿ ರೈತರ ಜಮೀನು ಸರ್ವೇ
  • ಜಮೀನು ಕಳೆದುಕೊಳ್ಳುವ ಆತಂಕದಲ್ಲಿ ರೈತರು
  • ಪೊಲೀಸರ ಸಹಕಾರದಲ್ಲಿ ಕಂದಾಯ ಇಲಾಖೆ ಸರ್ವೇ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ಹಾರೋಹಳ್ಳಿ ಗ್ರಾಮದಲ್ಲಿ ಮಂಗಳವಾರ ಕಂದಾಯ ಇಲಾಖೆ ಅಧಿಕಾರಿಗಳು ರೈತರ ಜಮೀನು ಸರ್ವೇ ಕಾರ್ಯ ನಡೆಸಿದರು. ಅಧಿಕಾರಿಗಳು ಕೈಗೊಂಡ ಸರ್ವೇ ಕಾರ್ಯಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹಾರೋಹಳ್ಳಿ ಗ್ರಾಮದ ಸರ್ವೇ ನಂಬರ್ 791ರಲ್ಲಿ 145 ಎಕರೆ ಸರ್ಕಾರಿ ಜಮೀನು ಇದ್ದು, ಅದನ್ನು ದುರಸ್ತಿ ಮಾಡದೇ ಒಬ್ಬ ವ್ಯಕ್ತಿಗೆ 10 ಎಕರೆ ಜಮೀನು ನೀಡಲು ಜಿಲ್ಲಾಡಳಿತ ಮುಂದಾಗಿರುವುದು ಸರಿಯಲ್ಲ. ಸಿಎಂ ಕ್ಷೇತ್ರದಲ್ಲಿ ರೈತರನ್ನು ಒಕ್ಕಲೆಬ್ಬಿಸಲು ಜಿಲ್ಲಾಡಳಿತ ಮುಂದಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ನೇತೃತ್ವದಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನ ಸ್ವಾತಂತ್ರೃ ಹೋರಾಟಗಾರ ನಾರಾಯಣಸ್ವಾಮಿ ಅವರಿಗೆ ಸರ್ವೇ ನಂ.791 (ಹೊಸ ಸರ್ವೇ ನಂ.87ರಲ್ಲಿ)ರಲ್ಲಿ 10 ಎಕರೆ ಜಮೀನು ಹಲವು ವರ್ಷಗಳ ಹಿಂದೆ ಮಂಜೂರಾಗಿತ್ತು. ಆದರೆ, ಅವರು ಸ್ವಾಧೀನದಲ್ಲಿ ಇಲ್ಲ. ಲೋಕಾಯುಕ್ತದ ಆದೇಶದ ಮೇರೆಗೆ ಇದೀಗ ಅವರಿಗೆ ಜಮೀನು ನೀಡಲು ಸರ್ವೇ ಕಾರ್ಯ ನಡೆಸಲಾಗಿದೆ ಎಂದು ಹೆಚ್ಚುವರಿ ತಹಸಿಲ್ದಾರ್ ವಿಶ್ವನಾಥ್ ತಿಳಿಸಿದರು.
ರೈತರ ಪಟ್ಟು: ಲೋಕಾಯುಕ್ತರು ಆದೇಶ ನೀಡಿದ್ದರೆ ಆದೇಶದ ಪ್ರತಿಯನ್ನು ನೀಡಿ. ಮೌಖಿಕ ಆದೇಶ ಮುಂದಿಟ್ಟುಕೊಂಡು ರೈತರು ಹಲವು ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಜಮೀನಿನಿಂದ ಒಕ್ಕಲೆಬ್ಬಿಸುವುದು ಸರಿಯಲ್ಲ. ಗೊಂದಲ ಪರಿಹರಿಸಲು ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಬೇಕು ಎಂದು ರೈತರು ಪಟ್ಟು ಹಿಡಿದರು.
ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ಸರ್ವೇ ಕಾರ್ಯಕ್ಕೆ ಮುಂದಾದಾಗ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದರು. ಪೊಲೀಸರು ರೈತರನ್ನು ತಡೆದು ಸರ್ವೇಗೆ ಅವಕಾಶ ಮಾಡಿಕೊಟ್ಟರು. ರೈತರಿಗೆ ಅನ್ಯಾಯವಾದರೆ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತರು ಎಚ್ಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net