

|ಮೃತ್ಯುಂಜಯ ಕಪಗಲ್ ಬೆಂಗಳೂರು
ರಾಜ್ಯದಲಿರುವ ತೋಟದ ಮನೆಗಳ ನಿವಾಸಿಗಳಿಗೆ ರಾತ್ರಿ ಹೊತ್ತು ವಿಷಜಂತುಗಳ ಭೀತಿ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೂ ತಾಪತ್ರಯದಿಂದ ಮುಕ್ತಗೊಳಿಸುವ ಹೊಸ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಕೈಹಾಕಿದೆ. ‘ಬೆಳಕು’ ಯೋಜನೆಯಡಿ ಹಳ್ಳಿಗಳ ಬಡವರ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಇದರಿಂದ ಉತ್ತೇಜಿತವಾದ ಇಂಧನ ಇಲಾಖೆ ಸದ್ಯ ತೋಟದ ಮನೆಗಳತ್ತ ಗಮನಹರಿಸಿದೆ. ತೋಟದ ಮನೆಗಳಿಗೆ ರಾತ್ರಿ ವೇಳೆ ಬೆಳಕಿನ ಭಾಗ್ಯ ಕಲ್ಪಿಸುವ ಚಿಂತನೆ ನಡೆಸಿದೆ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹೊಸ ವರ್ಷದ ಕೊಡುಗೆಯಾಗಿ ಈ ಸೌಲಭ್ಯ ನೀಡುವ ಸಾಧ್ಯತೆಯಿದೆ.
ಪ್ರಾಯೋಗಿಕ ಜಾರಿ: ರಾಜ್ಯದಲ್ಲಿ ಒಂದು ಲಕ್ಷ ತೋಟದ ಮನೆಗಳಿರುವ ಅಂದಾಜಿದ್ದು, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಹಾಗೂ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ)ಯ ತಲಾ ಒಂದು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಸರ್ಕಾರ ಯೋಚಿಸಿದೆ. ಪೂರಕವಾಗಿ ಎರಡು ಕಂಪನಿಗಳ ವ್ಯಾಪ್ತಿಯಲ್ಲಿ ತೋಟದ ಮನೆಗಳ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ವಿದ್ಯುತ್ ಪೂರೈಕೆ ಮಾರ್ಗ, ವಿಧಾನ ಮತ್ತು ತಗುಲುವ ವೆಚ್ಚದ ಕುರಿತು ಡಿಸೆಂಬರ್ ಅಂತ್ಯದೊಳಗೆ ವರದಿ ಇಲಾಖೆ ಕೈಸೇರುವ ನಿರೀಕ್ಷೆಯಿದೆ. ನಂತರ ಮುಖ್ಯಮಂತ್ರಿ ಜತೆಗೆ ರ್ಚಚಿಸಿ, ಪ್ರಾಯೋಗಿಕ ಯೋಜನೆಗೆ ಬೇಕಾದ ಬಜೆಟ್ ವ್ಯವಸ್ಥೆ ಮಾಡಿಕೊಳ್ಳಲಿದೆ. ಉದ್ದೇಶಿತ ಪ್ರಸ್ತಾವನೆಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ ಅಸ್ತು ಎಂದ ಬಳಿಕ ಅನುಷ್ಠಾನದ ದಾರಿ ಸುಗಮವಾಗಲಿದೆ.
ಪರ್ಯಾಯ ಪರಿಹಾರ: 10 ಅಶ್ವ ಶಕ್ತಿ ಸಾಮರ್ಥ್ಯದ ನೀರಾವರಿ ಪಂಪ್ಸೆಟ್ಗಳಿಗೆ ದಿನದ ಏಳು ತಾಸು ಉಚಿತ ವಿದ್ಯುತ್ ಪೂರೈಕೆಗೆ ಪ್ರತ್ಯೇಕ ಫೀಡರ್ ವ್ಯವಸ್ಥೆಯಾಗಿದ್ದು, ಸೋರಿಕೆ ಹಾಗೂ ಪೂರೈಕೆಯಲ್ಲಿ ಏರುಪೇರು ತಪ್ಪಿಸಲಾಗಿದೆ. ಐಪಿ ಸೆಟ್ಗಳ ರೀತಿಯಲ್ಲೇ ತೋಟದ ಮನೆಗಳಿಗೂ ಪ್ರತ್ಯೇಕ ಫೀಡರ್ ವ್ಯವಸ್ಥೆ ಮಾಡಿ ಸಿಂಗಲ್ ಫೇಸ್ ವಿದ್ಯುತ್ ಪೂರೈಸುವುದೇ ಪರ್ಯಾಯ ಪರಿಹಾರೋಪಾಯ. ಈ ಕ್ರಮದಿಂದ ವಿದ್ಯುತ್ ದುರ್ಬಳಕೆಗೆ ನಿಯಂತ್ರಿಸಿ ತೋಟದ ಮನೆ ನಿವಾಸಿಗಳು ರಾತ್ರಿ ವೇಳೆ ವಿದ್ಯುತ್ ಸೌಲಭ್ಯ ಪಡೆಯುವುದಕ್ಕೆ ಅನುಕೂಲವಾಗಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಇಲಾಖೆಯಲ್ಲಿ ಸುಧಾರಣೆ ಪರ್ವ: ಸಹಾಯಕ, ಕಿರಿಯ ಇಂಜಿನಿಯರ್ ಸೇರಿ 1899 ಹುದ್ದೆಗಳಿಗೆ ನೇಮಕ ಆದೇಶಪತ್ರ ವಿತರಣೆ, ಅನೇಕ ವರ್ಷಗಳಿಂದ ಬಾಕಿಯಿದ್ದ 640 ಇಂಜಿನಿಯರ್ಗಳಿಗೆ ಬಡ್ತಿ ಹಾಗೂ ಖಾಲಿ ಹುದ್ದೆಗಳಿಗೆ 600 ಸಿಬ್ಬಂದಿ ವರ್ಗಾವಣೆ ಪಾರದರ್ಶಕ ಮತ್ತು ಮಧ್ಯವರ್ತಿ ಮುಕ್ತವಾಗಿ ನಡೆದಿದ್ದು, ಇಲಾಖೆಯಲ್ಲಿ ಸುಧಾರಣೆ ಪರ್ವ ಶುರುವಾಗಿದೆ. ಪವರಿರ್ತಕ ಕಾರ್ಯಪಾಲನೆ, ಬಳಕೆ, ಆಯುಷ್ಯ, ಪದೇಪದೆ ಕೆಡುವುದಕ್ಕೆ ಕಾರಣ ಮತ್ತು ಕೆಟ್ಟ ಅಥವಾ ಹೊಸ ಪರಿವರ್ತಕ ಸಾಗಣೆ ಮೇಲೆ ನಿಗಾವಹಿಸಲೆಂದು ಆಪ್ ಅಭಿವೃದ್ಧಿಪಡಿಸುತ್ತಿದ್ದು, ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ವಿದ್ಯುತ್ ಇಲ್ಲವೇಕೆ?: ತೋಟದ ಮನೆಗಳು ರಾತ್ರಿ ಹೊತ್ತು ವಿದ್ಯುತ್ ವಂಚಿತವಾಗು ವುದಕ್ಕೆ ನೀರಾವರಿ ಪಂಪ್ಸೆಟ್ಗಳು ಮುಖ್ಯ ಕಾರಣ. ತೋಟದ ಮನೆಗಳಿಗೆ ರಾತ್ರಿ ಪೂರೈಸುವ ವಿದ್ಯುತ್ ಪಂಪ್ಸೆಟ್ಗೂ ಬಳಸಿದರೆ ಕಷ್ಟವೆಂದು ಈ ಸೌಲಭ್ಯ ಕಡಿತಗೊಳಿಸಲಾಗಿದೆ. ಅಧಿಕೃತ ಹಾಗೂ ಅನಧಿಕೃತ ಒಳಗೊಂಡು 34.43 ಲಕ್ಷ ನೀರಾವರಿ ಪಂಪ್ಸೆಟ್ಗಳಿವೆ. ಅಷ್ಟೂ ಐಪಿ ಸೆಟ್ಗಳು 24 ತಾಸು ಕೆಲಸ ಮಾಡಿದರೆ ವಿದ್ಯುತ್ ಕೊರತೆಯಾಗುತ್ತದೆ. ಅಲ್ಲದೆ, ಅಗತ್ಯ ವಿದ್ಯುತ್ ಪ್ರಸರಣ, ವಿತರಣೆ ಮಾರ್ಗಗಳಿಲ್ಲ. ಇದರಿಂದಾಗಿ ಚಾಲ್ತಿ ಪರಿವರ್ತಕ, ಮಾರ್ಗದ ಮೇಲೆ ಒತ್ತಡ ಬಿದ್ದು, ವಿದ್ಯುತ್ ಪೂರೈಕೆ ಏರಪೇರಾಗಬಹುದು ಎಂಬ ಕಾರಣ ತೋಟದ ಮನೆಗಳಿಗೂ ರಾತ್ರಿ ವಿದ್ಯುತ್ ಪೂರೈಸುತ್ತಿಲ್ಲ.