ಬೆಳೆಹಾನಿ ಪರಿಹಾರ ವಿತರಣೆ ಮಾರ್ಗಸೂಚಿ ಬದಲಾವಣೆಗೆ ಕ್ರಮ

9-RNR-04
Published on

ಹಾವೇರಿ: ಬೆಳೆ ಹಾನಿ ಪರಿಹಾರ ವಿತರಣೆಯನ್ನು ಸರಳಿಕರಣಗೊಳಿಸಲು ಎನ್​ಡಿಆರ್​ಎಫ್​ ಮಾರ್ಗಸೂಚಿಗಳಲ್ಲಿ ಬದಲಾವಣೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಶೀಘ್ರದಲ್ಲಿಯೇ ಬೆಳೆಹಾನಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ರೈತರಿಗೆ ಭರವಸೆ ನೀಡಿದರು.

ಸ್ಥಳಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರೈತರ ಅಹವಾಲುಗಳನ್ನು ಆಲಿಸಿದ ಸಚಿವರು, ಬೆಳೆಹಾನಿ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಈಗಾಗಲೇ ಮುಖ್ಯಮಂತ್ರಿಯವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಪರಿಹಾರ ವಿತರಣೆಗೆ ಹಣದ ಕೊರತೆ ಇಲ್ಲ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 38 ಕೋಟಿ ರೂ. ಇದೆ. ಜಂಟಿ ಸಮೀಕ್ಷೆ ಪ್ರಗತಿಯಲ್ಲಿದ್ದು, ತ್ವರಿತವಾಗಿ ರ್ಪೂಣಗೊಳಿಸಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕೆಸಿಸಿ ಬ್ಯಾಂಕ್​ ಇನ್ನೂ ವಿಭಜನೆ ಆಗಿಲ್ಲ. ಹೀಗಾಗಿ ರೈತರ ನಿರೀಕ್ಷೆ ಪ್ರಮಾಣದಲ್ಲಿ ಸಾಲ ಸಿಗುತ್ತಿಲ್ಲ. ಗದಗ, ಧಾರವಾಡ, ಹಾವೇರಿ ಜಿಲ್ಲೆಗಳ ರೈತರಿಗೆ ಬೆಳೆಸಾಲ ವಿತರಣೆಯಲ್ಲಿ ಸಮಾನ ನೀತಿ ಅನುಸರಿಸಬೇಕಾಗಿದೆ. ಕೃಷಿ ಸಾಲ ವಿತರಣೆಯಲ್ಲಿ ಜಿಲ್ಲೆಗೆ ಹೆಚ್ಚಿನ ಆದ್ಯತೆೆ ನೀಡಬೇಕು ಎಂದು ಕೆಸಿಸಿ ಬ್ಯಾಂಕ್​ ಆಡಳಿತ ಮಂಡಳಿಗೆ ಮನವಿ ಮಾಡಲಾಗುವುದು ಎಂದರು.

ಕೆಸಿಸಿ ಬ್ಯಾಂಕ್​ ಈಗ ಆಥಿರ್ಕವಾಗಿ ಚೇತರಿಸಿಕೊಳ್ಳುತ್ತಿದೆ. ಬ್ಯಾಂಕ್​ ವಿಭಜನೆ ಕಷ್ಟ ಎಂಬ ಅರಿವು ಇದೆ. ಆದರೂ ಸಹಜ ಇಂದಲ್ಲ ನಾಳೆ ಪ್ರತ್ಯೇಕ ಬ್ಯಾಂಕ್​ ಸ್ಥಾಪನೆ ಆಗಲೇ ಬೇಕು. ಹೀಗಾಗಿ ಗದಗ ಮತ್ತು ಧಾರವಾಡ ಜಿಲ್ಲೆಗಳ ಮನವೊಲಿಸಿ ಬ್ಯಾಂಕ್​ ವಿಭಜನೆಗೆ ಪ್ರಯತ್ನ ಮಾಡಲಾಗುವುದು ಎಂದರು.

ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಪರಿಹಾರ ವಿತರಣೆಗೆ ಅಜಿರ್ ಸಲ್ಲಿಸದಂತಹ ವ್ಯವಸ್ಥೆ ಬರಬೇಕು ಎಂಬ ಬೇಡಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಯು.ಬಿ. ಬಣಕಾರ ಅವರು ತಮ್ಮ ತಾಲೂಕಿನಲ್ಲಿ ತಹಸೀಲ್ದಾರ್​ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚೆ ಮಾಡಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ರೈತರ ಸಮಸ್ಯೆಗಳಿಗೆ ವಿವರಣೆ ನೀಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ, ಬೆಳೆ ಹಾನಿ ಪರಿಹಾರವನ್ನು ಶೀಘ್ರ ವಿತರಣೆ ಮಾಡಲಾಗುವುದು. ಜಮೀನುಗಳ ದಾರಿ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು. ರೈತರ ಆತ್ಮ್ಮಹತ್ಯೆ ಪ್ರಕರಣಗಳ ಪರಿಹಾರ ವಿತರಣೆಗೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶಾಸಕರಾದ ಪ್ರಕಾಶ ಕೋಳಿವಾಡ, ಯಾಸಿರ್​ಅಹ್ಮದ್​ಖಾನ್​ ಪಠಾಣ, ಗ್ಯಾರಂಟಿ ಸಮಿತಿ ಉಪಾಧ್ಯಕ್ಷ ಎಸ್​.ಆರ್​. ಪಾಟೀಲ, ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಪಂ ಸಿಇಒ ರುಚಿ ಬಿಂದಾಲ್​, ಎಸ್ಪಿ ಯಶೋಧ ವಂಟಿಗೋಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net