

ಸಾಗರ: ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಕುಲವಳ್ಳಿ ಗ್ರಾಪಂ ವ್ಯಾಪ್ತಿಯ 9 ಗ್ರಾಮಗಳಲ್ಲಿ ಅನಾದಿ ಕಾಲದಿಂದ ವಾಸವಿದ್ದು, ಉಳುಮೆ ಮಾಡುತ್ತಿರುವವರಿಗೆ ಸಾಗುವಳಿ ಚೀಟಿ ಕೊಡಿಸಲು ಸರ್ಕಾರದ ಮೇಲೆ ಒತ್ತಡ ತರುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲೆ ರಾಷ್ಟ್ರೀಯ ರೈತ ಸಂಘದ ಪ್ರಮುಖರು ಮಂಗಳವಾರ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸದರು.
ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದಾಗ ನಮ್ಮ ಸಮಸ್ಯೆ ಇರುವ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು. 9 ಗ್ರಾಮಗಳ ರೈತರು ವಾಸಿಸುತ್ತಿರುವ ಮತ್ತು ಸಾಗುವಳಿ ಮಾಡುತ್ತಿರುವ ಜಮೀನಿನ ಸಾಗುವಳಿ ಮಾಹಿತಿ ನೀಡಲು ಸೂಚಿಸಿದ್ದರು. ಭೂಮಾಪಕರು ಅಳತೆ ಮಾಡಿ ಸೂಕ್ತ ವರದಿ ತಯಾರಿಸಿ ನೀಡಲು ಆದೇಶ ಕೂಡ ಮಾಡಲಾಗಿತ್ತು. ಈಗ ಅಳತೆ ಮಾಡಿದ್ದು, ಜಮೀನು ಸಾಗುವಳಿ ವಿವರ ಸಂಗ್ರಹಿಸಲಾಗಿದೆ. ಆದರೆ ಕೆಲವು ಪ್ರಭಾವಿಗಳು ತಮ್ಮ ನಿರ್ದೇಶನಕ್ಕೆ ವಿರುದ್ಧವಾಗಿ ಕೆಲಸ ಮಾಡಿದ್ದು, ಕಾಗದ ಪತ್ರಗಳನ್ನು ತಿರುಚಿದ್ದಾರೆ. ಹಾಗಾಗಿ ತಾವು ಸರ್ಕಾರಕ್ಕೆ ಮತ್ತೊಮ್ಮೆ ಮನವರಿಕೆ ಮಾಡಿಕೊಡಬೇಕು. ತಮ್ಮ ನೇತೃತ್ವದಲ್ಲಿ ಮತ್ತೊಮ್ಮೆ ಕಂದಾಯ ಸಚಿವರನ್ನು ಭೇಟಿಯಾಗಿ ಸುಗ್ರಿವಾಜ್ಞೆ ಮೂಲಕ ಸರ್ವೇ ಮತ್ತು ಸ್ಥಳ ಮಹಜರಿಗೆ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಂಘದ ಅಧ್ಯಕ್ಷ ಪ್ರಕಾಶ್ ನಾಯ್ಕ ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಅಂದು ಕಂದಾಯ ಮಂತ್ರಿಯಾಗಿದ್ದ ಕಾಗೋಡು ತಿಮ್ಮಪ್ಪ ಅವರು ಸ್ಥಳ ಪರಿಶೀಲಿಸಿ ಸರ್ವೇಗೆ ಸೂಚಿಸಿದ್ದರು. ಆದರೆ ಈತನಕ ರೈತರಿಗೆ ಭೂಮಾಲಿಕತ್ವ ಸಿಕ್ಕಿಲ್ಲ. ಈಗ ಭೂಮಾಲೀಕರ ಕುಟುಂಬದವರೇ ಶಾಸಕರಾಗಿರುವುದರಿಂದ 10 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಅನ್ಯಾಯವಾಗಿದೆ ಎಂದರು.
ಮನವಿ ಸ್ವೀಕರಿಸಿ ಮಾತನಾಡಿದ ಕಾಗೋಡು ತಿಮ್ಮಪ್ಪ, ಕುಲವಳ್ಳಿ ಗ್ರಾಪಂ ವ್ಯಾಪ್ತಿಯ 9 ಹಳ್ಳಿಗಳಲ್ಲಿ 2016-17ರಲ್ಲಿ ಸರ್ವೇ ನಡೆದಿದೆ. ನಾನು ಕಂದಾಯ ಸಚಿವನಾಗಿದ್ದಾಗ ಎರಡು ಬಾರಿ ಭೇಟಿ ನೀಡಿದ್ದೇನೆ. ಈಗ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರಿಗೆ ಪತ್ರ ಬರೆದು ರೈತರಿಗೆ ನ್ಯಾಯ ದೊರಕಿಸಿ ಕೊಡಲು ಮನವಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಗೌರವ ಡಾಕ್ಟರೇಟ್ ಪುರಸ್ಕೃತರಾದ ಹಿನ್ನೆಲೆಯಲ್ಲಿ ಇದೇ ಸಂದರ್ಭ ತಿಮ್ಮಪ್ಪ ಅವರನ್ನು ಸನ್ಮಾನಿಸಿದರು. ರೈತ ಸಂಘದ ಪ್ರಮುಖರಾದ ಅರ್ಜುನ ಮಡಿವಾಳ, ಮಂಜು ಕುಡುಚಿ, ಮಹಾಂತೇಶ್, ಬ್ರಹ್ಮ, ಗುರುಸಿದ್ದ ನಿಂಗಾಪುರಮಠ್ ಇತರರಿದ್ದರು.