ರೈತರ ದಿನದ ವಿಶೇಷ: ಒಂದು ಎಕರೆಯಲ್ಲಿ ಐದು ಲಕ್ಷ ರೂ. ಗಳಿಕೆ!

ವಿಜಯವಾಣಿ - 2023-12-23T124007.034
Published on

ಜಯತೀರ್ಥ ಪಾಟೀಲ, ಕಲಬುರ್ಗಿ

ಕಲಬುರ್ಗಿ: ಇದು ಸಣ್ಣ, ಪ್ರಗತಿಪರ ರೈತನ ಯಶೋಗಾಥೆ! ಹತ್ತಾರು ಎಕರೆ ಜಮೀನಿದ್ದರೂ ಅತಿಯಾದ ಮಳೆ, ಬರದಿಂದ ಹಾಳು ಎಂದು ಗೋಳಾಡುವ ಈ ದಿನಗಳಲ್ಲಿ ಒಂದು ಎಕರೆ ಜಮೀನಿನಲ್ಲಿ ವಾರ್ಷಿಕ 5 ಲಕ್ಷ ರೂ.ಗೂ ಅಧಿಕ ಆದಾಯ ಪಡೆಯುತ್ತಿರುವ ರೈತರೊಬ್ಬರು ಇದೀಗ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದ್ದು, ಇಲ್ಲ ಎನ್ನುವುದಕ್ಕಿಂತ ಇದ್ದುದರಲ್ಲಿ ಹೇಗೆ ಅದಾಯ ಗಳಿಸಬಹುದು ಎಂಬುದಕ್ಕೆ ನಿದರ್ಶನವೂ ಆಗಿದ್ದಾರೆ.

ಆಳಂದ ತಾಲೂಕು ಸಂಗೋಳಗಿ(ಸಿ) ಗ್ರಾಮದ ವೆಂಕಟರಾವ್ ಬಿರಾಜದಾರ್ ಎಂಬುವರಿಗೆ ಇರುವುದು ಒಂದೇ ಎಕರೆ ಜಮೀನು. ಇದ್ದುದರಲ್ಲಿ ಸಂತೃಪ್ತಿ ಕಂಡು ಒಂದಕ್ಕೆ ಎರಡು ಹೇಗೆ ಮಾಡಬಹುದೆಂದು ಯೋಚಿಸಿ ಕೃಷಿಯಲ್ಲಿ ಮುಂದಡಿ ಇಡುತ್ತಿದ್ದಾರೆ. ಒಂದು ಎಕರೆಯಲ್ಲಿ 20 ಗುಂಟೆ ಅಂಧ್ರದ ಬಾಲನಗರ ತಳಿಯ 125 ಸೀತಾಫಲ ಬೆಳೆದಿದ್ದಾರೆ. ಬದು (ವೇಸ್ಟ್ ಜಾಗ)ವಿನಲ್ಲಿ ಕರಿಬೇವು, ಆಕಳಿಗೆ ಮೇವು, ತೊಂಡಲಕಾಯಿ, ನುಗ್ಗಿ, ತೆಂಗು ಬೆಳೆದಿದ್ದಾರೆ.

ಮೂರು ತೆಂಗಿನ ಗಿಡ, ಐದು ಲಿಂಬೆ, ಎರಡು ಪೇರು, ಮೂರು ದಾಳಿಂಬೆ, ಆರು ನುಗ್ಗೆ, ಎರಡು ನೀರಲಹಣ್ಣು, ಏಳು ಚಿಕ್ಕು, 80 ಬಾರಿ ಹಣ್ಣಿನ ಗಿಡ ಹಾಕಿದ್ದಾರೆ. ಇದರ ಮಧ್ಯೆ ಮೆಂತೆ, ಪಾಲಕ್‌, ಕೊತ್ತಂಬರಿ, ಪುದಿನ, ಬಜ್ಜಿ ಪಲ್ಲೆ, ಚಿಲಕಿ ಪಲ್ಲೆ, ಮೂಲಂಗಿ, ತಪ್ಪಲು ಉಳ್ಳಾಗಡ್ಡಿ ಬೆಳೆದಿದ್ದಾರೆ.

"ಇರುವ ಒಂದು ಎಕರೆ ಜಮೀನು, ವರ್ಷವಿಡೀ ಒದ್ದಾಡಿದರೂ ಏನೂ ಲಾಭ ಸಿಗಲ್ಲ. ಬದುಕುವುದೇ ಕಷ್ಟ. ಹೀಗಾಗಿ ಮಲ್ಟಿಪಲ್ ಕೃಷಿ ಮೂಲಕ ಏನಾದರೂ ಸಾಧನೆ ಮಾಡಬಹುದು ಎಂದು ಯೋಚಿಸಿ, ಕೃಷಿ ವಿಜ್ಞಾನಿಗಳ ಸಲಹೆ ಪಡೆದು ದುಡಿಯುತ್ತಿದ್ದೇನೆ. ಪ್ರತಿವರ್ಷ ಎಲ್ಲ ಖರ್ಚು ಹೋಗಿ 4-5 ಲಕ್ಷ ರೂ. ಆದಾಯ ಬರುತ್ತಿದೆ" ಎಂದು ಸಂಗೋಳಗಿಯ ಪ್ರಗತಿಪರ ರೈತರಾದ ವೆಂಕಟರಾನ್ ಬಿರಾಜದಾರ್ ಹೇಳಿದ್ದಾರೆ.

ಹಂತ-ಹಂತ ಆದಾಯ: ಹಂತ ಹಂತವಾಗಿ ಅದಾಯ ಬರುವಂತೆ ಯೋಜನೆ ಮಾಡಿಕೊಂಡಿದ್ದಾರೆ. ನಿತ್ಯದ ಆದಾಯಕ್ಕೆ ತರಕಾರಿ ಮಾರಾಟ, ಕುರಿ ವ್ಯವಹಾರದಿಂದ ತಿಂಗಳ ಆದಾಯ, ಹಣ್ಣು ಹಂಪಲು ಮಾರಾಟ ವಾರ್ಷಿಕ ಆದಾಯ ತಂದುಕೊಡುತ್ತಿವೆ. ಈ ಎಲ್ಲ ಒಟ್ಟಿಗೆ ಲೆಕ್ಕ ಹಾಕಿದರೆ ಸುಮಾರು 5 ಲಕ್ಷ ರೂ.ಗೂ (ಖರ್ಚು ವೆಚ್ಚ ತೆಗೆದು) ಅಧಿಕ ಗಳಿಸುತ್ತಿದ್ದಾರೆ. ಸೆಲ್ಫ್ ಸಸ್ಟೇನೆಬಲ್ ಮಾದರಿಯಲ್ಲಿ ಸಣ್ಣ ವ್ಯವಸಾಯ ಮಾಡುತ್ತಿರುವುದು ವಿಶೇಷ. 2019ರಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಪ್ರಶಸ್ತಿ ನೀಡಿ ಗೌರವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net