ಸಚಿವ ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ

21NGD2
Published on


ವಿಜಯವಾಣಿ ಸುದ್ದಿಜಾಲ ನಂಜನಗೂಡು
ಕೋಲಾರ ಜಿಲ್ಲೆಯಲ್ಲಿ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಳಿನಿಗೌಡ ಅವರ ವಿರುದ್ಧ ಅಸಂವಿಧಾನ ಪದ ಬಳಕೆ ಮಾಡಿರುವ ಸಣ್ಣ ನೀರಾವರಿ ಸಚಿವ ಜೆ.ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ರೈತಸಂಘದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಮಾವೇಶಗೊಂಡ ರೈತ ಮುಖಂಡರು ಸಚಿವ ಜೆ.ಮಾಧುಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ವಿದ್ಯಾಸಾಗರ್ ಮಾತನಾಡಿ, ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ರೈತರ ಪರವಾಗಿ ಸಚಿವರ ಗಮನ ಸೆಳೆಯಲು ಮುಂದಾದ ರೈತ ಸಂಘದ ಜಿಲ್ಲಾಧ್ಯಕ್ಷೆ ನಳಿನಿಗೌಡ ಅವರನ್ನು ಉದ್ದೇಶಿಸಿ ನಾನು ಕೆಟ್ಟ ಮನುಷ್ಯ, ರ‌್ಯಾಸ್ಕಲ್ ಎಂಬ ಪದಬಳಕೆ ಮಾಡಿರುವುದು ಖಂಡನೀಯ. ಇಂತಹ ಕೆಟ್ಟ ಮನುಷ್ಯರನ್ನು ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಇರಿಸಿಕೊಳ್ಳು ವುದು ಶೋಭೆ ತರುವಂತದ್ದಲ್ಲ. ಅವರನ್ನು ಸಿಎಂ ಯಡಿಯೂರಪ್ಪ ಈ ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸುವ ಮೂಲಕ ಕೆಟ್ಟ ಮನುಷ್ಯರಿಗೆ ಸರ್ಕಾರದಲ್ಲಿ ಆಡಳಿತ ನಡೆಸಲು ಅವಕಾಶ ನೀಡುವುದಿಲ್ಲ ಎಂಬುದನ್ನು ರುಜುವಾತು ಮಾಡಲಿ ಎಂದು ಆಗ್ರಹಿಸಿದರು.
ಜೆ.ಮಾಧುಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡದಿದ್ದಲ್ಲಿ ಅವರು ರಾಜ್ಯದ ಯಾವ ಮೂಲೆಗೂ ಭೇಟಿ ಕೊಟ್ಟರೂ ರೈತಸಂಘದ ಮುಖಂಡರು ಮುತ್ತಿಗೆ ಹಾಕಿ ಘೇರಾವ್ ಹಾಕುವ ಮೂಲಕ ಉಗ್ರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪ್ರತಿಭ ಟನೆಯಲ್ಲಿ ರೈತಸಂಘದ ಜಿಲ್ಲಾ ಕಾರ್ಯದರ್ಶಿ ಇಮ್ಮಾವು ರಘು, ತಾಲೂಕು ಅಧ್ಯಕ್ಷ ಸತೀಶ್‌ರಾವ್, ಮಂಜು ಕಿರಣ್, ವೆಂಕಟೇಶ್, ನಾಗರಾಜು, ಶಿವಣ್ಣ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net