ಎಂಎಸ್‌ಪಿ ಜಾರಿಗೆ ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

raita sanga protest
ಸಂಯುಕ್ತ ಕಿಸಾನ್ ಮೋರ್ಚಾದಿಂದ ಹರಿಯಾಣದ ಶಂಭು ಗಡಿಯಲ್ಲಿ ನಡೆಸುತ್ತಿರುವ ಚಳುವಳಿಗೆ ಪೂರಕವಾಗಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ಎಚ್.ಆರ್.ಬಸವರಾಜಪ್ಪ, ಹಿಟ್ಟೂರು ರಾಜು, ಕೆ.ರಾಘವೇಂದ್ರ, ಕಸಟ್ಟಿ ರುದ್ರೇಶ್, ಜಿ.ಎನ್.ಪಂಚಾಕ್ಷರಿ,ಹನುಮಂತಪ್ಪ ಪ್ರತಿಭಟನೆಯಲ್ಲಿದ್ದರು.
Published on

ಶಿವಮೊಗ್ಗ: ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದು, ಎಂಎಸ್‌ಪಿಯನ್ನು ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಯುಕ್ತ ಕಿಸಾನ್ ಮೋರ್ಚಾದಿಂದ ಹರಿಯಾಣದ ಶಂಭು ಗಡಿಯಲ್ಲಿ ನಡೆಸುತ್ತಿರುವ ಚಳುವಳಿಗೆ ಪೂರಕವಾಗಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ರೈತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ಎಂಎಸ್‌ಪಿಯನ್ನು ಕಾನೂನಾತ್ಮಕವಾಗಿ ಜಾರಿ ಮಾಡಬೇಕು. ವಿದ್ಯುತ್ಛಕ್ತಿ ಖಾಸಗೀಕರಣ ಮಾಡಬಾರದೆಂದು ಒತ್ತಾಯಸಿ ದೆಹಲಿಯ ಹೊರವಲಯದಲ್ಲಿ 12 ತಿಂಗಳು ಸತತವಾಗಿ ಚಳುವಳಿ ನಡೆಸಲಾಯಿತು. ಆ ಸಂದರ್ಭದಲ್ಲಿ 700ಕ್ಕೂ ಅಧಿಕ ರೈತರು ಹುತಾತ್ಮರಾದರು. ನಂತರ ಚಳುವಳಿಗೆ ಮಣಿದು ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂಪಡೆಯಿತು. ಎಂಎಸ್‌ಪಿಯನ್ನು ಕಾನೂನು ಬದ್ಧವಾಗಿ ಜಾರಿ ಮಾಡುವುದಾಗಿ ಹಾಗೂ ವಿದ್ಯುತ್ ಶಕ್ತಿ ಖಾಸಗೀಕರಣ ಮಾಡುವುದಿಲ್ಲ ಎಂದು ಲಿಖಿತ ಭರವಸೆ ನೀಡಿತ್ತು. ಆದರೆ ಎರಡು ವರ್ಷ ಕಳೆದರೂ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಿಡಿಕಾರಿದರು.

ಇದೀಗ ಹರಿಯಾಣದ ಶಂಭು ಗಡಿಯಲ್ಲಿ ಕಳೆದ ಎಂಟು ತಿಂಗಳಿಂದ ರೈತರು ಚಳುವಳಿ ನಡೆಸುತ್ತಿದ್ದಾರೆ. ರೈತ ನಾಯಕ ಜಗತ್‌ಸಿಂಗ್‌ದಲ್ಲೈವಾಲ ಅವರು 38 ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು ಅವರ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿಗೋಸ್ಕರ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ. ಸುಪ್ರೀಂಕೋರ್ಟ್ ಕೂಡ ಅವರ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿ ನ್ಯಾಯವಾಗಿ ಪರಿಹಾರ ಕೊಟ್ಟು ಅಮೂಲ್ಯವಾದಂತಹ ಅವರ ಜೀವ ಉಳಿಸಬೇಕೆಂದು ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳಿಗೆ ಸೂಚನೆ ಕೊಟ್ಟಿದೆ. ಆದರೂ ಎರಡೂ ಸರ್ಕಾರಗಳು ನಿರ್ಲಕ್ಷೃ ವಹಿಸಿವೆ ಎಂದು ಕಿಡಿಕಾರಿದರು.

ಈ ಚಳುವಳಿ ಪಂಜಾಬ್ ಮತ್ತು ಹರಿಯಾಣ ರೈತರಿಗೆ ಮಾತ್ರ ಸೀಮಿತವಾಗಿಲ್ಲ. ಭಾರತದ ರೈತರ ಪರವಾಗಿ ಚಳುವಳಿ ನಡೆಯುತ್ತಿದೆ. ಜಗತ್‌ಸಿಂಗ್ ದಲ್ಲೈವಾಲ ಅವರು ಕೂಡ ಈ ದೇಶದ ರೈತರ ಪರವಾಗಿ ಮಹಾತ್ಮ ಗಾಂಧೀಜಿ ಅವರು ಹಾಕಿಕೊಟ್ಟಂತಹ ಮಾರ್ಗದಲ್ಲಿ ಅಹಿಂಸಾತ್ಮಕವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಮಾತುಕತೆ ಮೂಲಕ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ಮೂಲಕ ರೈತ ಮುಖಂಡನ ಪ್ರಾಣ ಉಳಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ದೇಶಾದ್ಯಂತ ಚಳುವಳಿಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ, ಗ್ರಾಮಾಂತರ ಅಧ್ಯಕ್ಷ ಕಸಟ್ಟಿ ರುದ್ರೇಶ್, ಭದ್ರಾವತಿ ತಾಲೂಕು ಅಧ್ಯಕ್ಷ ಜಿ.ಎನ್.ಪಂಚಾಕ್ಷರಿ, ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net