ವಿಶೇಷ ಅಧಿವೇಶನಕ್ಕಾಗಿ ರಾಜ್ಯಪಾಲರಿಗೆ ರೈತರ ಮೊರೆ

Farmers appeal to Governer for spl session
Published on

ಬೆಂಗಳೂರು: ಕಾವೇರಿ ಜಲಸಂಕಷ್ಟ, ಜನರ ಆತಂಕ ನಿವಾರಿಸಲು ಕೂಡಲೇ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯುವಂತೆ ಸರ್ಕಾರಕ್ಕೆ ಸೂಚಿಸಲು ರಾಜ್ಯಪಾಲರಿಗೆ ಕರ್ನಾಟಕ ಜಲಸಂರಕ್ಷಣಾ ಸಮಿತಿ ನಿಯೋಗ ಮನವಿ ಮಾಡಿದೆ.

ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರನ್ನು ಕುರಬೂರು ಶಾಂತಕುಮಾರ್ ನೇತೃತ್ವದ ನಿಯೋಗ ಶನಿವಾರ ಭೇಟಿ ಮಾಡಿ, ಸಮಸ್ಯೆ ಹಾಗೂ ಹೋರಾಟದ ಬಗ್ಗೆ ವಿವರಿಸಿ ಮನವಿಯನ್ನು ಸಲ್ಲಿಸಿದೆ.

ತಮಿಳುನಾಡು ಸರ್ಕಾರ ವಿಶೇಷ ಅಧಿವೇಶನ ನಡೆಸಿ ನಿರ್ಣಯ ಅಂಗೀಕರಿಸಿದೆ. ಕರ್ನಾಟಕದವರು ನೀರು ಬಿಡದೆ ತೊಂದರೆ ಕೊಡುತ್ತಿದ್ದಾರೆ ಎಂದು ವರದಿ ಸಲ್ಲಿಸಿದ್ದಾರೆ. ಆದರೆ ಕರ್ನಾಟಕ ರಾಜ್ಯದಲ್ಲಿ ಇಂತಹ ಕಠಿಣ ನಿರ್ಧಾರಗಳು ಜಾರಿಗೆ ಬಂದಿಲ್ಲ.

ಮೂರು ದಿನಗಳಲ್ಲಿ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು ಚರ್ಚಿಸಬೇಕು. ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಆತಂಕವಿರುವ ಕಾರಣ ತಮಿಳುನಾಡಿಗೆ ಹರಿಸುವ ನೀರು ನಿಲ್ಲಿಸಲಾಗುತ್ತದೆ ಎಂಬ ನಿರ್ಣಯ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಗೆಹಲೋತ್ ಅವರಿಗೆ ನಿಯೋಗ ಮೊರೆಯಿಟ್ಟಿದೆ.

ಬಂದ್ ಯಶಸ್ವಿಯಾದ ಬಳಿಕ ರೈತರ ನಿಯೋಗವನ್ನು ಕರೆಯಿಸಿಕೊಂಡು ಸಿಎಂ ಸಿದ್ದರಾಮಯ್ಯ ಚರ್ಚಿಸಿದ್ದರು. ವಿಧಾನ ಮಂಡಲ ವಿಶೇಷ ಅಧಿವೇಶನ ಕರೆಯಬೇಕೆಂದು ಪ್ರಸ್ತಾಪಿಸಿದಾಗ ನಿವೃತ್ತ ನ್ಯಾಯಾಧೀಶರು, ನೀರಾವರಿ ತಜ್ಞರ ಜತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಸಮಿತಿ ಸಲ್ಲಿಸಿದ ಮನವಿಯಲ್ಲಿ ಬೇಸರ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net