ಭೂಮಿ ನೀಡಲು ರೈತರ ಒಪ್ಪಿಗೆ

pumped storage
ಸಾಗರದಲ್ಲಿ ಆಯೋಜಿಸಿದ್ದ ಪಂಪ್ಡ್ ಸ್ಟೋರೇಜ್ ಯೋಜನೆ ವ್ಯಾಪ್ತಿಯ ಹೆನ್ನಿ ಭಾಗದ ರೈತರ ಸಭೆಯಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿದರು. ಗುರುದತ್ತ ಹೆಗಡೆ, ವೀರೇಶ್‌ಕುಮಾರ್, ಚಂದ್ರಶೇಖರ ನಾಯ್ಕ, ಟಿ.ಪಿ.ರಮೇಶ್ ಇತರರಿದ್ದರು.
Published on

ಸಾಗರ: ತಾಲೂಕಿನ ಶರಾವತಿ ಪಂಪ್ಡ್ ಸ್ಟೋರೇಜ್ ಕಾಮಗಾರಿಗೆ ರೈತರು ಭೂಮಿ ಬಿಟ್ಟುಕೊಡಲು ಒಪ್ಪಿದ್ದಾರೆ. ಕೆಲವು ಬೇಡಿಕೆಗಳನ್ನು ಮನವಿ ಮೂಲಕ ನೀಡಿದ್ದು, ಮಾತುಕತೆಯ ಮೂಲಕ ಅದನ್ನು ಪೂರೈಸಲಾಗುತ್ತದೆ. ಪಂಪ್ಡ್ ಸ್ಟೋರೇಜ್‌ಗಾಗಿ ರೈತರ 8.32 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಸಾಗರ ಉಪವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಶರಾವತಿ ಅಂತರ್ಗತ ಭೂವಿದ್ಯುತ್ ಯೋಜನೆ ವ್ಯಾಪ್ತಿಗೆ ಒಳಪಡುವ ಹೆನ್ನಿ ಭಾಗದ ರೈತರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಪಂಪ್ಡ್ ಸ್ಟೋರೇಜ್‌ನಿಂದ ದೊಡ್ಡ ಪ್ರಮಾಣದ ಕಾಡು ನಾಶವಾಗುತ್ತದೆ ಎನ್ನುವ ಸುಳ್ಳುಸುದ್ದಿ ಹಬ್ಬಿಸಲಾಗುತ್ತಿದೆ. ವಾಸ್ತವದಲ್ಲಿ 20 ರೈತ ಕುಟುಂಬಗಳ 8.32 ಎಕರೆ ಕೃಷಿಭೂಮಿ ಜತೆಗೆ 54 ಹೆಕ್ಟೇರ್ ಅರಣ್ಯಭೂಮಿ ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುತ್ತದೆ. ರೈತರು ಸಭೆಯಲ್ಲಿ ಬೇಡಿಕೆಗಳನ್ನು ಮಂಡಿಸಿದ್ದಾರೆ. ರೈತರ ಪರವಾಗಿ ನಾವಿದ್ದೇವೆ. ಸುಮಾರು 2 ಸಾವಿರ ಮೆ.ವಾ. ವಿದ್ಯುತ್ ಯೋಜನೆಯಡಿ ಆಣೆಕಟ್ಟು ನಿರ್ಮಿಸದೆ ಉತ್ಪಾದನೆ ಮಾಡುವ ಅಪರೂಪದ ಯೋಜನೆ ಇದಾಗಿದೆ ಎಂದರು.

ಸುಮಾರು 8,644 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನವಾಗುತ್ತಿದೆ. ಮುಂದಿನ ಪೀಳಿಗೆ ವಿದ್ಯುತ್ ಸಮಸ್ಯೆ ಅನುಭವಿಸಬಾರದು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ಇಂಧನ ಸಚಿವ ಕೆ.ಜೆ.ಜಾರ್ಜ್ ಯೋಜನೆ ಮಂಜೂರು ಮಾಡಿದ್ದಾರೆ. ಅರಣ್ಯ ನಾಶವಾದರೆ ಅದಕ್ಕೆ ಪರ್ಯಾಯ ಅರಣ್ಯ ಬೆಳೆಸುವ ನಿಟ್ಟಿನಲ್ಲಿ ಗಮನ ಹರಿಸಲಾಗಿದೆ. ಹೆದ್ದಾರಿ ಸೇರಿ ಬೇರೆಬೇರೆ ಯೋಜನೆ ಸಂದರ್ಭ ಅಲ್ಪಸ್ವಲ್ಪ ಅರಣ್ಯ ನಾಶವಾಗುತ್ತದೆ. ಅಂದಮಾತ್ರಕ್ಕೆ ಉತ್ತಮ ಯೋಜನೆ ಕೈಬಿಡಲು ಸಾಧ್ಯವಿಲ್ಲ. ಭೂಮಿ ಬಿಟ್ಟುಕೊಡುವ ರೈತರಿಗೆ ಸೂಕ್ತ ಪರಿಹಾರದ ಜತೆಗೆ ಕುಟುಂಬಕ್ಕೊಂದು ಉದ್ಯೋಗ ಕೊಡುವ ಭರವಸೆ ನೀಡಿದ್ದೇವೆ. ಶೀಘ್ರವೇ ಯೋಜನೆ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಬೇಡಿಕೆಗಳಿಗೆ ಪೂರಕ ಸ್ಪಂದನೆ: ಪಂಪ್ಡ್ ಸ್ಟೋರೇಜ್‌ಗೆ ಸಂಬಂಧಿಸಿ ರೈತರ ಜತೆ ಸಭೆ ನಡೆಸಲಾಗಿದೆ. ಕಾನೂನು ಪ್ರಕಾರವೇ ಎಲ್ಲ ಚಟುವಟಿಕೆಗಳು ನಡೆಯುತ್ತಿವೆ. ಪರಿಸರ ನಾಶ ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ರೈತರು ಸಮಸ್ಯೆ ಹಾಗೂ ಬೇಡಿಕೆಗಳನ್ನು ಸಲ್ಲಿಸಿದ್ದಾರೆ. ಅದಕ್ಕೆ ಪೂರಕವಾಗಿ ಸ್ಪಂದಿಸುತ್ತೇವೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಭರವಸೆ ನೀಡಿದರು. ಜಿಲ್ಲಾ ಮತ್ತು ತಾಲೂಕು ಆಡಳಿತದಿಂದ ಎಲ್ಲ ರೀತಿಯ ಸಹಾಯ ನೀಡಲಾಗುತ್ತದೆ. ರೈತರಿಗೆ ಪರ್ಯಾಯ ಭೂಮಿ ಕೊಡುವ ಜತೆಗೆ ಉದ್ಯೋಗ ನೀಡುವ ಬಗ್ಗೆ ಗಮನ ಹರಿಸಲಾಗುತ್ತದೆ. ಪರಸ್ಪರ ಮಾತನಾಡಿ ರೈತರಿಗೆ ಎಲ್ಲ ವಿಚಾರಗಳನ್ನೂ ತಿಳಿಸಿ ಕ್ರಮ ಕೈಗೊಳ್ಳುತ್ತೇವೆ. ಯೋಜನೆ ವಿಚಾರದಲ್ಲಿ ಮುಚ್ಚುಮರೆ ಮಾಡುವ ಪ್ರಶ್ನೆ ಇಲ್ಲ ಎಂದರು.

ಪ್ರೊಬೇಷನರಿ ಜಿಲ್ಲಾಧಿಕಾರಿ ನಾಗೇಂದ್ರಕುಮಾರ್, ಉಪವಿಭಾಗಾಧಿಕಾರಿ ವೀರೇಶ್‌ಕುಮಾರ್, ಟಿ.ಪಿ.ರಮೇಶ್, ತಹಸೀಲ್ದಾರ್ ಚಂದ್ರಶೇಖರ್ ನಾಯ್ಕ, ಅರಣ್ಯ ಇಲಾಖೆಯ ರವಿಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net