

ನವದೆಹಲಿ: ಇಂದಿನ ಆಧುನಿಕ ಯುಗದಲ್ಲಿ ಪ್ರತಿದಿನ ಹೊಸ ಹೊಸ ತಂತ್ರಜ್ಞಾನ ಬರುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಅದರಲ್ಲೂ ಇಂದು ರೋಬೋಟಿಕ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ತಂತ್ರಜ್ಞಾನ ಬಹುತೇಕ ಕ್ಷೇತ್ರವನ್ನು ಆವರಿಸಿಕೊಳ್ಳುತ್ತಿದೆ. ಮನುಷ್ಯರು ಮಾಡುವ ಕೆಲಸಗಳನ್ನು ಎಐ ಮತ್ತು ರೋಬೋಟ್‌ಗಳು ಸುಲಭವಾಗಿ ಮಾಡುತ್ತಿವೆ. ಈಗಾಗಲೇ ಕೆಲ ಕಂಪನಿಗಳಲ್ಲಿ ಈ ಟೆಕ್ನಾಲಜಿಗಳನ್ನು ಬಳಸಲಾಗುತ್ತಿದ್ದು, ಇದರಿಂದ ಕೆಲವರು ತಮ್ಮ ಕೆಲಸವನ್ನು ಸಹ ಕಳೆದುಕೊಂಡಿದ್ದಾರೆ. ಇದು ಹೀಗೆ ಮುಂದುವರಿದರೆ ಎಲ್ಲ ಕ್ಷೇತ್ರಗಳನ್ನು ರೋಬೋಟಿಕ್ ಮತ್ತು ಎಐ ಆವರಿಸಿಕೊಂಡುಬಿಡುತ್ತದೆ. ಅದು ಕೃಷಿಯನ್ನು ಸಹ ಬಿಡದಿರಬಹುದು.
ಹೌದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ರೋಬೋಟ್, ರೈತನಾಗಿ ಬದಲಾದರೆ ಹೇಗಿರುತ್ತದೆ ಎಂಬುದನ್ನು ತೋರಿಸಲಾಗಿದೆ. ಈ ವೈರಲ್ ವಿಡಿಯೋ ನೋಡಿದರೆ ಒಂದು ಕ್ಷಣ ನಿಮ್ಮ ಹುಬ್ಬೇರುವುದಂತೂ ಖಂಡಿತ.
ವೈರಲ್ ಆಗಿರುವ ವಿಡಿಯೋದಲ್ಲಿ ರೈತನಾಗಿರುವ ರೋಬೋಟ್ ಜಮೀನಿನಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಬಹುದು. ಜಮೀನಿನಲ್ಲಿ ನಾಟಿ ಮಾಡುವುದು, ಬೆಳೆಗಳಿಗೆ ನೀರುಣಿಸುವುದು, ಉಳುಮೆ ಮಾಡುವುದು, ಗೊಬ್ಬರ ಹಾಕುವುದು ಮತ್ತು ಬೆಳೆಗಳನ್ನು ಕಟಾವು ಮಾಡುವುದು ಸೇರಿದಂತೆ ರೈತರು ಮಾಡುವ ಎಲ್ಲ ಕೆಲಸವನ್ನು ರೋಬೋಟ್ ಮಾಡುತ್ತಿದೆ.
ಟ್ವಿಟ್ಟರ್ ಖಾತೆ InterestingSTEM ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಭವಿಷ್ಯದ ಕೃಷಿ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ವಿಡಿಯೋವನ್ನು ಎಐ ಟೆಕ್ನಾಲಜಿ ಮೂಲಕ ಸೃಷ್ಟಿಯಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಈವರೆಗೂ 1 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದೆ.
ವಿಡಿಯೋ ನೋಡಿದ ಅನೇಕ ನೆಟ್ಟಿಗರು ವಿವಿಧ ಕಾಮೆಂಟ್‌ಗಳ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರೋಬೋಟ್‌ಗಳು ಎಲ್ಲವನ್ನೂ ಮಾಡಿದರೆ, "ಮನುಷ್ಯರು" ಏಕೆ ಬೇಕು? ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದರೆ, ಭವಿಷ್ಯವು ಈ ರೀತಿ ಆಗದಿರಲಿ ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾರೆ. ವಿಡಿಯೋವನ್ನು ಇನ್ನು ಚೆನ್ನಾಗಿ ಎಡಿಟ್ ಮಾಡಬೇಕಿತ್ತು ಎಂದು ಇನ್ನೋರ್ವ ನೆಟ್ಟಿಗ ನಗೆ ಚಟಾಕಿ ಹಾರಿಸಿದ್ದಾರೆ. (ಏಜೆನ್ಸೀಸ್)