ಭಾರತ್ ಬಂದ್ ಫಲಿಸಿತೇ?; ಷಾ ಭೇಟಿಗೆ ಹೊರಟಿತು 13 ರೈತ ನಾಯಕರ ನಿಯೋಗ

Nation Lead
Published on

ನವದೆಹಲಿ: ಬೆಳಗ್ಗೆಯಿಂದ ನಡೆದ ಭಾರತ್ ಬಂದ್ ಬಳಿಕದ ಫಲವೇನು ಎಂಬ ಕುತೂಹಲ ಈಗ ಎಲ್ಲರಲ್ಲೂ ಮೂಡಿದೆ. ಮಾತ್ರವಲ್ಲ, ಇನ್ನು ಕೆಲವೇ ಕ್ಷಣಗಳಲ್ಲಿ ಅದಕ್ಕೆ ಉತ್ತರ ಸಿಗುವ ಸಾಧ್ಯತೆಗಳೂ ಗೋಚರಿಸಿವೆ. ಏಕೆಂದರೆ 13 ರೈತ ನಾಯಕರ ನಿಯೋಗ ಗೃಹ ಸಚಿವ ಅಮಿತ್​ ಷಾ ಅವರ ಭೇಟಿಗೆ ಹೊರಟಿದೆ.

ರೈತರ ಪ್ರತಿಭಟನೆ ನಡೆಯುತ್ತಿರುವ ಪ್ರಮುಖ ಸ್ಥಳವಾದ ಸಿಂಘು ಗಡಿಯಿಂದ 13 ರೈತನಾಯಕರ ನಿಯೋಗ ಷಾ ಅವರನ್ನು ಭೇಟಿ ಮಾಡಲು ಹೊರಟಿದ್ದು, ರಾತ್ರಿ ಏಳರ ಸುಮಾರಿಗೆ ಮಾತುಕತೆ ನಡೆಯಲಿದೆ ಎನ್ನಲಾಗಿದೆ. ರೈತಮುಖಂಡರನ್ನು ಗೃಹಸಚಿವರು ಕರೆ ಮಾಡಿ ಸಂಪರ್ಕಿಸಿದ್ದು ಮಾತುಕತೆಗೆ ಕರೆದಿದ್ದಾರೆ ಎಂಬುದಾಗಿ ಹರಿಯಾಣ ಭಾರತೀಯ ಕಿಸಾನ್​ ಯೂನಿಯನ್​ ಅಧ್ಯಕ್ಷ ಗುರ್ನಾಮ್​ ಸಿಂಗ್ ಚೌಥುನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮಾತುಕತೆ ಬಳಿಕ ಕೇಂದ್ರ ಸರ್ಕಾರದ ನಿಲುವು ಏನಿದೆ ಎಂಬುದು ತಿಳಿಯಲಿದ್ದು, ಆ ಬಳಿಕ ಮುಂದಿನ ನಡೆ ಏನಿರಬೇಕು ಎಂಬುದನ್ನು ರೈತ ನಾಯಕರು ನಿರ್ಧರಿಸಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಪ್ರತಿಭಟನೆಯ ಮುಂದಿನ ಬೆಳವಣಿಗೆ ಸಾಕಷ್ಟು ಕುತೂಹಲ ಮೂಡಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net