

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಡಿಸೆಂಬರ್ 8ರಂದು "ಭಾರತ್ ಬಂದ್"ಗೆ ರೈತ ನಾಯಕರು ಶುಕ್ರವಾರ ಕರೆ ನೀಡಿದ್ದಾರೆ.
ನಿನ್ನೆ ನಡೆದ ಸಭೆಯಲ್ಲಿ ಕೃಷಿ ಕಾನೂನುಗಳನ್ನು ಹಿಂಪಡೆಯಲೇಬೇಕೆಂದು ಸರ್ಕಾರವನ್ನು ಕೇಳಿದ್ದೇವೆ. ಇದರೊಂದಿಗೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಡಿ.8ಕ್ಕೆ ಭಾರತ್ ಬಂದ್ಗೆ ಕರೆ ನೀಡಿದ್ದೇವೆ ಎಂದು ಭಾರತೀಯ ಕಿಸಾನ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಹರ್ವಿಂದರ್ ಸಿಂಗ್ ಲಡ್ಖ್ವಾಲ್ ತಿಳಿಸಿದ್ದಾರೆ.
ಪ್ರತಿಭಟನೆಯನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲೇಬೇಕಿದೆ. ಕೇಂದ್ರ ಸರ್ಕಾರ ಕೃಷಿ ಕಾನೂನುಗಳನ್ನು ಹಿಂಪಡೆಯಲೇಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಮಾತ್ರ ನಿಲ್ಲುವುದಿಲ್ಲ ಎಂದು ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಹನ್ನಾಮ್ ಮೊಲ್ಲಾ ಹೇಳಿದ್ದಾರೆ.
ಒಂದು ವೇಳೆ ಸರ್ಕಾರ ನಾಳೆ (ಡಿ.5) ನಡೆಯುವ ಸಭೆಯಲ್ಲಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಕೃಷಿ ಕಾನೂನಿನ ವಿರುದ್ಧ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆಂದು ಮತ್ತೊಬ್ಬ ರೈತ ನಾಯಕ ಗುರ್ನಮ್ ಸಿಂಗ್ ಛದೋನಿ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ ಮಾತುಕತೆಗಳು ನಡೆದಿದ್ದು, ಫಲಪ್ರದವಾಗುವಲ್ಲಿ ವಿಫಲವಾಗಿದೆ. ರೈತರ ಬೇಡಿಕೆಗಳಿಗೆ ಸರ್ಕಾರ ಒಪ್ಪಲು ತಯಾರಿಲ್ಲ. ಇತ್ತ ರೈತರು ಸಹ ತಮ್ಮ ನಿಲುವನ್ನು ಬಿಟ್ಟುಕೊಡುತ್ತಿಲ್ಲ. ಹೀಗಾಗಿ ನಾಳೆಯು ಸಹ ಸಭೆ ನಡೆಯಲಿದೆ.
ಸರ್ಕಾರದ ಪರವಾಗಿ ರೈತರ ಜತೆ ಮಾತನಾಡಿರುವ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಎಲ್ಲರ ಸಲಹೆಗಳನ್ನು ಸರ್ಕಾರದೊಂದಿಗೆ ಚರ್ಚಿಸಿ, ಮುಕ್ತ ಮನಸ್ಸಿನಿಂದ ಪರಿಗಣಿಸಿಲಾಗುವುದು ಎಂದು 40 ರೈತ ನಾಯಕರಿಗೆ ಭರವಸೆಯನ್ನು ನೀಡಿದ್ದಾರೆ. ಆದರೆ, ರೈತರು, ತರಾತುರಿಯಲ್ಲಿ ಪಾಸ್ ಮಾಡಿರುವ ಮೂರು ಕೃಷಿ ಕಾನೂನುಗಳಲ್ಲಿ ಸಾಕಷ್ಟು ದೋಷಗಳಿವೆ. ಅವುಗಳನ್ನು ರದ್ದುಪಡಿಸಬೇಕೆಂಬ ಬೇಡಿಕೆಗೆ ಅಂಟಿಕೊಂಡಿದ್ದಾರೆ.
ತೋಮರ್ ಅವರು ಸುಮಾರು 8 ಗಂಟೆಗಳವರೆಗೆ ರೈತರೊಂದಿಗೆ ಮಾತುಕತೆ ನಡೆಸಿದ ಬಳಿಕ ಎಲ್ಲ ವಿಚಾರಗಳನ್ನು ಸರ್ಕಾರ ಪರಿಗಣಿಸಲಿದೆ ಎಂದು ಹೇಳಿದ್ದು, ನಾಳಿನ ಸಭೆ ತುಂಬಾ ಮಹತ್ವ ಪಡೆದುಕೊಂಡಿದೆ. ಒಂದು ವೇಳೆ ಸರ್ಕಾರ ಕೃಷಿ ಕಾನೂನುಗಳ ತಿದ್ದುಪಡಿಗೆ ಒಪ್ಪಿಕೊಳ್ಳುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿರುವ ತೋಮರ್, ನಾನೇನು ಭವಿಷ್ಯ ಹೇಳುವವನಲ್ಲ. ಸಭೆ ಸೇರಿದ ಬಳಿಕ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ ಎಂದಷ್ಟೇ ಹೇಳಿದ್ದಾರೆ. (ಏಜೆನ್ಸೀಸ್)