ರೈತರಿಗೆ ಅನ್ಯಾಯವಾಗದಂತೆ ಬೆಳೆ ಸಮೀಕ್ಷೆ ನಡೆಸಿ: ಶಾಸಕ ಟಿ. ರಘುಮೂರ್ತಿ ಸೂಚನೆ

clk 8
Published on

ಚಳ್ಳಕೆರೆ: ಮಳೆ ಇಲ್ಲದೆ ಬೆಳೆ ಕಳೆದುಕೊಂಡ ರೈತರಿಗೆ ಪರಿಹಾರ ಮತ್ತು ವಿಮೆ ಹಣ ಸಿಗುವ ರೀತಿ ಸರ್ಕಾರಕ್ಕೆ ವರದಿ ಸಲ್ಲಿಸುವಂರೆ ಶಾಸಕ ಟಿ. ರಘುಮೂರ್ತಿ ಜಿಲ್ಲಾಧಿಕಾರಿಗೆ ಸೂಚಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕಿನ ಸಮಸ್ಯೆಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಮುಂಗಾರು ಮಳೆ ಮಧ್ಯಂತರದಲ್ಲಿ ಕೈಕೊಟ್ಟು ನೆಲೆಗಡಲೆ, ತೊಗರಿ ಬೆಳೆ ನಷ್ಟವಾಗಿದೆ. ಬೆಳೆ ನಷ್ಟದ ಪ್ರಮಾಣ ಗುರುತಿಸಲು ಈಗಾಗಲೇ ತಾಲೂಕು ಆಡಳಿತ ಮತ್ತು ಕೃಷಿ ಇಲಾಖೆ ಜಂಟಿ ಸಮೀಕ್ಷೆ ನಡೆಸುತ್ತಿವೆ. ಯಾವ ರೈತರಿಗೂ ಅನ್ಯಾಯವಾಗದ ರೀತಿ ಜಮೀನಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು. ರೈತರ ದಾಖಲೆ ಸಂಗ್ರಹದಲ್ಲಿ ಯಾವುದೇ ಲೋಪ ಆಗಬಾರದು. ರೈತರು ಬೆಳೆವಿಮೆ, ಪರಿಹಾರ ಬಂದಿಲ್ಲ ಎಂದು ಸಮಸ್ಯೆ ಹೇಳುವ ರೀತಿಯಾಗಬಾರದು ಎಂದರು.

ಜಿಲ್ಲಾಧಿಕಾರಿ ವೆಂಕಟೇಶ್ ಪ್ರತಿಕ್ರಿಯಿಸಿ, ಈಗಾಗಲೇ ಬೆಳೆ ಸಮೀಕ್ಷೆ ಕಾರ್ಯ ನಡೆಯುತ್ತಿದೆ. ರೈತರ ಜಮೀನುಗಳಿಗೆ ಭೇಟಿ ನೀಡಿ ನೈಜ ಬೆಳೆ ಪರಿಸ್ಥಿತಿ ದಾಖಲು ಮಾಡಿಕೊಳ್ಳಲಾಗುತ್ತಿದೆ. ಪ್ರತಿದಿನವೂ ಸಮೀಕ್ಷಾ ಕಾರ್ಯ ಪರಿಶೀಲನೆ ಮಾಡುತ್ತಿದ್ದೇವೆ. ಯಾವ ರೈತರಿಗೂ ಪರಿಹಾರ ಕೈತಪ್ಪದ ರೀತಿ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಪಂಚಾಯಿತಿ ಹಂತದಲ್ಲಿ ಸ್ಮಶಾನ ಮತ್ತು ನಿವೇಶನ ಸಮಸ್ಯೆ ಪರಿಹರಿಸುವ ಕೆಲಸ ಆಗಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಮಶಾನ ಒತ್ತುವರಿ ತೆರವಿಗೆ ಮುಂದಾಗಬೇಕು. ಹಳ್ಳಿಗಳಲ್ಲಿ ನಿವೇಶನ ಬೇಡಿಕೆಗೆ ಅನುಸಾರ ಸರ್ಕಾರಿ ಭೂಮಿ ಗುರುತಿಸಬೇಕು. ಈಗಾಗಲೇ ಜನಸ್ಪಂದನ, ಗ್ರಾಮಸಭೆಗಳಲ್ಲಿ ಬಂದ ಅಹವಾಲುಗಳನ್ನು ಪರಿಹರಿಸುವ ರೀತಿಯಲ್ಲಿ ಪಂಚಾಯಿತಿ ಆಡಳಿತಗಳು ಕೆಲಸ ನಿರ್ವಹಿಸುವಂತೆ ನಿಗಾ ವಹಿಸಬೇಕು ಎಂದು ತಾಪಂ ಇಒ ಎಚ್. ಶಶಿಧರ ಅವರಿಗೆ ಶಾಸಕರು ಸೂಚಿಸಿದರು.

ಚಳ್ಳಕೆರೆ ಪ್ರತಿ ವಾರ್ಡಲ್ಲೂ ಸ್ವಚ್ಛತೆ ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪಗಳಿವೆ. ಕೆಲಸ ಮಾಡಲು ಆಗದಿದ್ದರೆ ವರ್ಗಾವಣೆ ಮಾಡಿಸಿಕೊಂಡಿ ಹೋಗಿ ಎಂದು ಪೌರಾಯುಕ್ತ ಎಚ್.ಜಿ. ಜಗರೆಡ್ಡಿ ವಿರುದ್ಧ ಹರಿಹಾಯ್ದರು.

ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲ ತಾಣ ಸೇರಿ, ಕಚೇರಿಗಳ ಮುಂದೆ ಪ್ರತಿಭಟನೆಗಳು ನಡೆಯುತ್ತಿವೆ. ಸೌಕರ್ಯಗಳಿಗೆ ಆಗ್ರಹಿಸಿ ನಡೆಯುವ ಪ್ರತಿಭಟನೆಗೆ ಸಂಬಂಧಪಟ್ಟ ಇಲಾಖೆಗಳು ಹೊಣೆಯಾಗಬೇಕಾಗುತ್ತದೆ. ನಿರ್ದಾಕ್ಷಿಣ್ಯ ಕ್ರಮದ ಮೂಲಕ ಸಮಸ್ಯೆ ಬಗೆಹರಿಸಬೇಕು ಎಂದು ಎಚ್ಚರಿಸಿದರು.

ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ರಸ್ತೆ ಒತ್ತುವರಿ ಮತ್ತು ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಾರಾದರೂ ತೊಂದರೆ ಮಾಡಿದರೆ ದೂರು ದಾಖಲು ಮಾಡಬೇಕು. ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

ಜಿಪಂ ಸಿಇಒ ಡಾ. ಆಕಾಶ್, ಎಡಿಸಿ ಕುಮಾರಸ್ವಾಮಿ, ತಹಸೀಲ್ದಾರ್ ರೇಹಾನ್‌ಪಾಷ, ತಾಪಂ ಇಒ ಎಚ್. ಶಶಿಧರ, ತಾಪಂ ಆಡಳಿತಾಧಿಕಾರಿ ಡಾ. ಬಿ. ಮಂಜುನಾಥ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net