

ಲಖನೌ: ನಾವು ನೋಡಿರುವಂತೆ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಬೀಡಾಡಿ ದನಗಳ ಹಾವಳಿ ಹೆಚ್ಚು ಎಂದರೆ ತಪ್ಪಾಗಲಾರದು. ಬೀಡಾಡಿ ದನಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಾಗೂ ಸ್ಥಳೀಯಾಡಳಿತಗಳು ಅಗತ್ಯ ಕ್ರಮ ಕೈಗೊಂಡರು ಯಾವುದು ಪಾಲನೆಯಾಗದಿರುವುದು ಬೇಸರದ ಸಂಗತಿಯಾಗಿದೆ. ಇದೀಗ ಬೀಡಾಡಿ ದನವೊಂದು ರೈತನ ಪ್ರಾಣ ಕಸಿದಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯು ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ನಡೆದಿದ್ದು, ಮೃತರನ್ನು ಅಬ್ದುಲ್ ವಾಹಿದ್ ಎಂದು ಗುರುತಿಸಲಾಗಿದೆ. ಮದವೇರಿದ ಹೋರಿಯೊಂದು ರೈತನಿಗೆ ಗುದ್ದಿದ ಪರಿಣಾಮ ದುರ್ಘಟನೆ ಸಂಭವಿಸಿದ್ದು, ಘಟನೆಯ ಸಂಪೂರ್ಣ ದೃಶ್ಯ ಸ್ಥಳದಲ್ಲಿ ಅಳವಡಿಸಲಾಗಿದ್ದ ಸಿಸಿಟವಿಯಲ್ಲಿ ಸೆರೆಯಾಗಿದೆ.
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಮಾರುಕಟ್ಟೆಯಲ್ಲಿ ಜನ ತರಕಾರಿ ಕೊಳ್ಳುತ್ತಿದ್ದು, ಮತ್ತೊಂದೆಡೆ ಬೀಡಾಡಿ ದನಗಳ ಗುಂಪು ರಸ್ತೆಬದಿ ಬಿಸಾಡಿರುವ ತರಕಾರಿಗಳನ್ನು ತಿನ್ನುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ಹೋರಿಯೊಂದು ಗುಂಪಿನಲ್ಲಿದ್ದ ಹಸುವಿನೊಂದಿಗೆ ಸಂಬೋಗ ನಡೆಸಲು ಮುಂದಾಗಿದ್ದು, ಅಲ್ಲೇ ತರಕಾರಿ ಕೊಳ್ಳುತ್ತಿದ್ದ ರೈತನಿಗೆ ಗುದ್ದಿದೆ. ಕೂಡಲೇ ಸ್ಥಳೀಯರು ರೈತನ ರಕ್ಷಣೆಗೆ ಧಾವಿಸಿದ್ದು, ಆತನನ್ನು ಮತ್ತೊಂದು ಬದಿಗೆ ಕರೆದುಕೊಂಡು ಬರುತ್ತಾರೆ. ಆದರೆ, ಆತ ಕುಸಿದು ಬಿದ್ದಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ಧಾರೆ.
ಮಾರ್ಚ್ 06ರಂದು ಸಚಿನ್ ಗುಪ್ತಾ ಎಂಬುವವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಈವರೆಗೆ 440ಕೆ ವೀವ್ಸ್ ಪಡೆದುಕೊಂಡಿದೆ. ಮನುಷ್ಯರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಕೂಡಲೇ ಸರ್ಕಾರ ಬೀಡಾಡಿ ದನಗಳ ಹಾವಳಿಯನ್ನು ತಪ್ಪಿಸಲು ಕೂಡಲೇ ಕಠಿಣ ಕ್ರಮವನ್ನು ಜಾರಿ ಮಾಡಬೇಕೆಂದು ನೆಟ್ಟಿಗರು ಕಮೆಂಟ್ ಮೂಲಕ ಆಗ್ರಹಿಸಿದ್ದಾರೆ.