

ರಾಣೆಬೆನ್ನೂರ: ಖಾಸಗಿ ಬೋರ್‌ವೆಲ್ ಮಾಲೀಕರಿಂದ ರೈತರಿಗೆ ಮತ್ತು ಸರ್ಕಾರಕ್ಕೆ ಆಗುತ್ತಿರುವ ಅನ್ಯಾಯ ತಡೆಗಟ್ಟುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಸುರೇಶಕುಮಾರ ಟಿ. ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ತಾಲೂಕಿನಲ್ಲಿ ತಮಿಳುನಾಡಿನಿಂದ ರಾಜ್ಯಕ್ಕೆ ಬಂದು ಯಾವುದೇ ಸರ್ಕಾರದ ಅನುಮತಿ ಪಡೆಯದೆ ಮತ್ತು ಜಿ.ಎಸ್.ಟಿ. ಬಿಲ್ ಒದಗಿಸದೆ ಅನಧಿಕೃತವಾಗಿ ರೈತರ ಹೊಲಗಳಲ್ಲಿ ಬೋರ್‌ವೆಲ್ ಕೊರೆದು ಅವರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದು ಕಂಡುಬಂದಿದೆ.
ಈಗಾಗಲೇ ರೈತರ ಹೊಲಗಳಲ್ಲಿ ಬೋರ್‌ವೆಲ್ ಕೊರೆದು ಯಾವುದೇ ರೈತರಿಗೆ ಬಿಲ್ ಕೊಡದೆ ಅನಧಿಕೃತವಾಗಿ ಬೋರ್ ಕೊರೆಯುತ್ತಾ ರೈತರಿಂದ ದುಪ್ಪಟ್ಟು ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಪ್ರಸ್ತುತ ಪೆಟ್ರೋಲ್ ಹಾಗೂ ಡಿಸೇಲ್ ದರ ಕಡಿಮೆಯಾಗಿದ್ದರೂ ಕಳೆದ ಒಂದು ತಿಂಗಳಿಂದ ಹೆಚ್ಚು ಹಣಕ್ಕೆ ಬೇಡಿಕೆಯಿಟ್ಟು ಬೋರ್‌ವೆಲ್ ಕೊರೆಯುತ್ತಿದ್ದಾರೆ. ಇದರಿಂದ ರೈತರು, ಸಾರ್ವಜನಿಕರು ಬರಗಾಲದ ಸಂಕಷ್ಟ ಪರಿಸ್ಥಿತಿಯಲ್ಲಿ ಅನ್ಯಾಯಕ್ಕೆ ಒಳಗಾಗುವಂತಾಗಿದೆ. ಕೂಡಲೇ ಸರ್ಕಾರ ಇವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರಮುಖರಾದ ಚಂದ್ರಣ್ಣ ಬೇಡರ, ರವಿ ಮುಲ್ಕಿಗೌಡ್ರ, ಬಸಪ್ಪ ಲಗುಬಗಿ, ಜಗದೀಶ ಹಿತ್ತಲಮನಿ, ಕರಬಸಪ್ಪ ಪಾಟೀಲ, ಚಮನಸಾಬ ಮುಮ್ಮಣಗೇರಿ, ಜಿ.ಎಂ. ಮುಮ್ಮಣಗೇರಿ, ಉಮೇಶ ಕರೂರ, ಕರಬಸಯ್ಯ ಶಂಕ್ರಿಮಠ, ವಾಸು ಗುಡ್ಡಣ್ಣನವರ, ಶೇಖಪ್ಪ ಹಿರೇಬಿದರಿ, ಹನುಮಂತಪ್ಪ ಬಸ್ರಳ್ಳಿ, ಲಕ್ಷ್ಮಣ ನಾಯಕ ಮತ್ತಿತರರು ಇದ್ದರು.