

ನವದೆಹಲಿ: ದೆಹಲಿಯ ಗಡಿಗಳಲ್ಲಿ ಕಳೆದೊಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದ ರೈತರ ವಿರುದ್ಧದ ಕೇಸುಗಳನ್ನು ಹಿಂಪಡೆಯುವು ಸೇರಿ ಇತರ ಬೇಡಿಕೆಗಳ ಕುರಿತು ಕೇಂದ್ರ ಸರ್ಕಾರ ಕಳುಹಿಸಿಕೊಟ್ಟ ಹೊಸ ಪ್ರಸ್ತಾವನೆಯನ್ನು ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಒಪ್ಪಿಕೊಂಡಿದ್ದು, ಪ್ರತಿಭಟನೆಗಳನ್ನು ಕೊನೆಗೊಳಿಸುವ ತೀರ್ವನವನ್ನು ಗುರುವಾರ ಪ್ರಕಟಿಸುವ ಸಾಧ್ಯತೆಯಿದೆ. ಪ್ರತಿಭಟನೆ ನಿಲ್ಲುಸುವ ಬಗ್ಗೆ ಬುಧವಾರ ನಿರ್ಣಾಯಕ ನಿರ್ಧಾರ ಹೊರಬೀಳುತ್ತದೆ ಎಂದು ನಿರೀಕ್ಷಿಸಲಾಗಿತ್ತು.
ಗುರುವಾರ ಮಧ್ಯಾಹ್ನ 12 ಗಂಟೆಗೆ ಸಿಂಘು ಗಡಿಯಲ್ಲಿ ರೈತ ಮುಖಂಡರು ಮತ್ತೆ ಸಭೆ ಸೇರಲಿದ್ದು, ಕೇಂದ್ರ ಸರ್ಕಾರದ ನೀಡಿರುವ ಭರವಸೆಗಳ ಬಗ್ಗೆ ರ್ಚಚಿಸಿ ನಂತರ ಪ್ರತಿಭಟನೆ ಅಂತ್ಯಗೊಳಿಸಬೇಕೆ ಬೇಡವೇ ಎಂಬ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರ ನಮ್ಮೊಂದಿಗೆ ಮಾತುಕತೆಗೆ ಆಸಕ್ತಿ ತೋರಿದ್ದು ಮತ್ತು ಪತ್ರಮುಖೇನ ಭರವಸೆ ನೀಡಿದ್ದು ಪ್ರಶಂಸನೀಯ. ಆದರೆ ಪತ್ರದಲ್ಲಿ ಕೆಲ ನ್ಯೂನತೆಗಳಿದ್ದವು. ಹೀಗಾಗಿ ಅದನ್ನು ಕೇಂದ್ರಕ್ಕೆ ವಾಪಸ್ ಕಳಿಸಿಕೊಟ್ಟಿದ್ದೇವೆ. ಹೀಗಾಗಿ ಗುರುವಾರದ ಸಭೆಯಲ್ಲಿ ನಿರ್ಣಯ ಅಂತಿಮ ಆಗುವ ನಿರೀಕ್ಷೆ ಇದೆ ಎಂದು ರೈತ ಮುಖಂಡ ಅಶೋಕ್ ಧವಳೆ ಹೇಳಿದ್ದಾರೆ.