

ಮುಂಬೈ: ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಚಿತ್ರವು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆನ ನಡುವೆಯೂ ಗಲ್ಲಾಪೆಟ್ಟಿಗೆಯಲ್ಲಿ ಕೋಟ್ಯಂತರ ರೂಪಾಯಿ ಬಾಚುವ ಮೂಲಕ ನಿರ್ಮಾಪಕರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಈ ಚಿತ್ರ ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಮತ್ತೊಮ್ಮೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆದ ವರ್ಷ ಡಿಸೆಂಬರ್ 01ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಶ್ನಲ್ಲಿ ಧೂಳೆಬ್ಬಿಸಿದ್ದ ಅನಿಮಲ್ ಚಿತ್ರವು ಜನವರಿ 26ರಂದು ಒಟಿಟಿಯಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಭಾರೀ ನಿರಾಸೆಯನ್ನುಂಟು ಮಾಡಿದೆ. ಈ ಬಗ್ಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ಅಭಿಮಾನಿಗಳ ನಿರಾಸೆಗೆ ಸ್ಪಷ್ಟ ಕಾರಣ ದೊರೆತ್ತಿದ್ದು, ಈ ಬಗ್ಗೆ ಚಿತ್ರತಂಡ ಸ್ಪಷ್ಟನೆ ನೀಡಿದೆ.
ಅನಿಮಲ್ ಸಿನಿಮಾ ಲಭ್ಯವಾಗಿದೆ. ಆದರೆ ಒಟಿಟಿಯಲ್ಲಿ ಈ ಸಿನಿಮಾ ನೋಡಿದ ಕೆಲವರಿಗೆ ಬೇಸರ ಆಗಿದೆ. ಅದಕ್ಕೆ ಕಾರಣವೂ ಸ್ಪಷ್ಟವಾಗಿದೆ. ಥಿಯೇಟರ್ ವರ್ಷನ್ನಲ್ಲಿ ಡಿಲಿಟ್ ಆಗಿದ್ದ ದೃಶ್ಯಗಳು ಕೂಡ ಒಟಿಟಿ ವರ್ಷನ್ನಲ್ಲಿ ಇರಲಿದೆ ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ, ಚಿತ್ರತಂಡದವರು ಅಭಿಮಾನಿಗಳ ನಿರೀಕ್ಷೆಯನ್ನು ಹುಸಿ ಮಾಡಿದ್ದು, ಒಟಿಟಿಯಲ್ಲಿ ಈ ಚಿತ್ರವನ್ನು ನೋಡಿದ ಬಳಿಕ ಒಂದು ವರ್ಗದ ಪ್ರೇಕ್ಷಕರು ಅಸಮಾಧಾನ ಹೊರಹಾಕಿದ್ದಾರೆ.\
ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಅನಿಮಲ್ ಸಿನಿಮಾ ಬಿಡುಗಡೆ ಆದಾಗ ಪ್ರೇಕ್ಷಕರು ಮೊದಲು ಚಿತ್ರದ ಅವಧಿಯನ್ನು ಗಮನಿಸಿದ್ದಾರೆ. ಚಿತ್ರಮಂದಿರದಲ್ಲಿ ಇದ್ದ ರೀತಿಯೇ 3 ಗಂಟೆ 24 ನಿಮಿಷ ಅವಧಿಯ ಸಿನಿಮಾವನ್ನೇ ಒಟಿಟಿಯಲ್ಲೂ ರಿಲೀಸ್ ಮಾಡಲಾಗಿದೆ. ಯಾವುದೇ ಡಿಲಿಟೆಡ್ ಸೀನ್ಗಳು ಕೂಡ ಇದರಲ್ಲಿ ಸೇರಿಸಿಲ್ಲ. ಹಾಗಾಗಿ ಪ್ರೇಕ್ಷಕರಿಗೆ ನಿರಾಸೆ ಆಗಿದ್ದು ಚಿತ್ರತಂಡದ ವಿರುದ್ಧ ಒಂದು ವರ್ಗದ ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಅಭಿಮಾನಿಗಳು ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಎಚ್ಚೆತ್ತಿರುವ ಚಿತ್ರತಂಡ ಡಿಲಿಟೆಡ್ ಸೀನ್ಗಳನ್ನು ಒಳಗೊಂಡ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಈಗಿರುವ ಅವಧಿಗೆ 8 ನಿಮಿಷಗಳನ್ನು ಸೇರಿಸಲಾಗುವುದು ಎಂದು ಚಿತ್ರತಂಡದ ಸದಸ್ಯರೊಬ್ಬರು ತಿಳಿಸಿದ್ದಾರೆ.