ಹೋದೆಯಾ ದೂರ ಓ.. ; ಖ್ಯಾತ ಗಾಯಕಿ ವಾಣಿ ಜಯರಾಂ ನಿಧನ

Vani Jayaram
Published on

ಚೆನ್ನೈ: ಪ್ರಸಕ್ತ ಸಾಲಿನ ಪದ್ಮಭೂಷಣ ಪುರಸ್ಕೃತೆ, ಖ್ಯಾತ ಗಾಯಕಿ ವಾಣಿ ಜಯರಾಂ ಅವರು ಇಂದು ಕೊನೆಯುಸಿರೆಳೆದರು. ಅವರಿಗೆ 78 ವರ್ಷ ವಯಸ್ಸಾಗಿತ್ತು. ಅವರು ಚೆನ್ನೈನ ನುಂಗಂಬಾಕಮ್​ನಲ್ಲಿನ ಹದ್ದೌಸ್ ರಸ್ತೆಯಲ್ಲಿರುವ ನಿವಾಸದಲ್ಲಿ ಕೊನೆಯುಸಿರೆಳೆದರು. ಅವರ ಹಣೆಯಲ್ಲಿ ಗಾಯವಾಗಿದ್ದು ಕಂಡುಬಂದಿದೆ ಎನ್ನಲಾಗಿದೆ.

ಕನ್ನಡ, ತುಳು ಮಾತ್ರವಲ್ಲದೆ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಉರ್ದು, ಮರಾಠಿ, ಬಂಗಾಳಿ, ಭೋಜಪುರಿ, ಒರಿಯಾ ಮುಂತಾದ ಭಾಷೆಗಳ ಸಿನಿಮಾಗಳಲ್ಲೂ ವಾಣಿ ಜಯರಾಂ ಹಾಡಿದ್ದಾರೆ. ಇವರು ಹಿನ್ನೆಲೆ ಗಾಯನಕ್ಕಾಗಿ ಮೂರು ಸಲ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಮಾತ್ರವಲ್ಲ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಗುಜರಾತ್, ಒಡಿಶಾ ರಾಜ್ಯಗಳಿಂದಲೂ ವಿವಿಧ ಪುರಸ್ಕಾರಗಳಿಗೆ ಪಾತ್ರರಾಗಿದ್ದರು.

ವೃತ್ತಿಪರ ಗಾಯಕಿಯಾಗಿ ಇತ್ತೀಚೆಗಷ್ಟೇ 50 ವರ್ಷಗಳನ್ನು ಪೂರೈಸಿರುವ ಅವರು 10 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ. ಇಳಯರಾಜ, ಆರ್​ಡಿ ಬರ್ಮನ್, ಕೆ.ವಿ.ಮಹದೇವನ್, ಒ.ಪಿ. ಅಯ್ಯರ್, ಮದನ್ ಮೋಹನ್, ಜಿ.ಕೆ.ವೆಂಕಟೇಶ್, ವಿಜಯಭಾಸ್ಕರ್, ರಾಜನ್​ ನಾಗೇಂದ್ರ ಮುಂತಾದ ಸಂಗೀತ ಸಂಯೋಜನೆಯಲ್ಲಿ ದನಿಯಾಗಿದ್ದರು.

ತೆರೆದಿದೆ ಮನೆ ಬಾ ಓ ಅತಿಥಿ, ಈ ಶತಮಾನದ ಮಾದರಿ ಹೆಣ್ಣು, ಭಾವ ಎಂಬ ಹೂವು ಅರಳಿ, ಇವ ಯಾವ ಸೀಮೆ ಗಂಡು ಕಣಮ್ಮೊ, ಹೋದೆಯಾ ದೂರ ಓ ಜೊತೆಗಾರ, ಏನೇನೊ ಆಸೆ ನೀ ತಂದ ಭಾಷೆ, ಸವಿ ನೆನಪುಗಳು ಬೇಕು ಮುಂತಾದ ಕನ್ನಡದ ಎವರ್​ಗ್ರೀನ್​ ಗೀತೆಗಳು ವಾಣಿ ಅವರ ಕಂಠದಿಂದ ಹೊರಹೊಮ್ಮಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net