

ಬೆಂಗಳೂರು: ( T Prabhakar Kalyani passes away ) 'ಕಾಂತಾರ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಖ್ಯಾತ ನಟ ಮತ್ತು ರಂಗಭೂಮಿ ಕಲಾವಿದ ಟಿ ಪ್ರಭಾಕರ್ ಕಲ್ಯಾಣಿ ಹಿರಿಯಡ್ಕದಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ನಿಧನರಾದರು.
ಪೆರ್ಡೂರಿನ ಮೂಲದವರೂ ಬ್ಯಾಂಕ್ ಆಫ್ ಬರೋಡಾದ ನಿವೃತ್ತ ಅಧಿಕಾರಿಯೂ ಆಗಿದ್ದ ಪ್ರಭಾಕರ್, ಕಾಂತಾರ ಚಿತ್ರದಲ್ಲಿ ವಕೀಲರ ಪಾತ್ರ ನಿರ್ವಹಿಸುವ ಮೂಲಕ ಪ್ರಸಿದ್ಧರಾಗಿದ್ದರು. ರಂಗಭೂಮಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಪ್ರಭಾಕರ್, ವಿವಿಧ ರಂಗ ನಾಟಕಗಳಲ್ಲಿ ಸಕ್ರಿಯವಾಗಿ ಅಭಿನಯಿಸಿದ್ದರು.
ಕಳೆದ 3 ದಿನಗಳ ಹಿಂದೆ ಹಿರಿಯಡಕ ಪೇಟೆಯಲ್ಲಿ ತಲೆ ಸುತ್ತಿ ಬಿದ್ದಿದ್ದರು. ಇಂದು (ಆ.8) ಮಲಗಿದಲ್ಲಿಯೇ ಹೃದಯಘಾತದಿಂದ ನಿಧನರಾಗಿದ್ದಾರೆ. 5 ವರ್ಷದ ಹಿಂದೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಸ್ಟಂಟ್ ಹಾಕಲಾಗಿತ್ತು.
ಕುಟುಂಬದ ಮೂಲಗಳ ಪ್ರಕಾರ, ಅವರು ಎರಡು ದಿನಗಳ ಹಿಂದೆ ಮನೆಯಲ್ಲಿ ಜಾರಿ ಬಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಬೆಳಿಗ್ಗೆ 8:30 ರ ಸುಮಾರಿಗೆ ಅವರು ತಮ್ಮ ಕೈ ಮತ್ತು ಕಾಲುಗಳಲ್ಲಿ ನೋವಿನ ಬಗ್ಗೆ ಪತ್ನಿ ಬಳಿ ಹೇಳಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಿದ್ಧತೆಗಳು ನಡೆಯುತ್ತಿದ್ದಾಗಲೇ ಅವರು ಕೊನೆಯುಸಿರೆಳೆದರು.
ಪ್ರಭಾಕರ್ ಅವರು ಪತ್ನಿ, ಒಬ್ಬ ಮಗ ಮತ್ತು ಅಪಾರ ಬಂಧುಮಿತ್ರರು ಮತ್ತು ಅಭಿಮಾನಿಗಳನ್ನು ಅಗಲಿದ್ದಾರೆ. ಅವರ ಅಂತಿಮ ವಿಧಿವಿಧಾನಗಳು ಶುಕ್ರವಾರ ಬೀಡಿನಗುಡ್ಡೆ ಚಿತಾಗಾರದಲ್ಲಿ ನೆರವೇರಲಿವೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.