

ನವದೆಹಲಿ: ದೇಶದಾದ್ಯಂತ ಆಯ್ಕೆಯಾಗಿರುವ 5,204 ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಲ್ಲಿ 1,107 (ಶೇ. 21 ರಷ್ಟು) ಜನಪ್ರತಿನಿಧಿಗಳು ಕುಟುಂಬ ರಾಜಕಾರಣದ ಹಿನ್ನೆಲೆ ಹೊಂದಿದ್ದಾರೆ. ಕರ್ನಾಟಕದ 94 ಜನಪ್ರತಿನಿಧಿಗಳೂ ಇದರಲ್ಲಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾಮ್್ಸರ್ (ಎಡಿಆರ್) ತಿಳಿಸಿದೆ. ಕುಟುಂಬ ರಾಜಕಾರಣದ ಹಿನ್ನೆಲೆಯಿಂದ ಬಂದು ಸಂಸದರಾದವರ ಸಂಖ್ಯೆ ಹೆಚ್ಚಿದ್ದು, ಶೇ. 31ರಷ್ಟು ಸಂಸದರು ಈ ಪಟ್ಟಿಯಲ್ಲಿದ್ದಾರೆ.
ಕಾಂಗ್ರೆಸ್ ಪಕ್ಷದ ಶೇ. 32ರಷ್ಟು ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಕುಟುಂಬ ರಾಜಕಾರಣದ ಹಿನ್ನೆಲೆ ಹೊಂದಿದ್ದರೆ, ಬಿಜೆಪಿ ಜನಪ್ರತಿನಿಧಿಗಳ ಸಂಖ್ಯೆ ಶೇ. 18 ರಷ್ಟಿದೆ. ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಹೊಂದಿರುವ ಜನಪ್ರತಿನಿಧಿಗಳ ಪಟ್ಟಿಯಲ್ಲಿ ಉತ್ತರ ಪ್ರದೇಶ (141) ಅಗ್ರ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ (129), ಬಿಹಾರ (96) ಮತ್ತು ಕರ್ನಾಟಕ (94) ನಂತರದ ಸ್ಥಾನದಲ್ಲಿವೆ. ಕರ್ನಾಟಕದ ಒಟ್ಟು 326 ಸಂಸದರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಲ್ಲಿ 94 ಜನರು ಕುಟುಂಬ ರಾಜಕಾರಣದಿಂದ ಬಂದವರಾಗಿದ್ದಾರೆ ಎಂದು ಎಡಿಆರ್ ತಿಳಿಸಿದೆ.
ಕುಟುಂಬ ರಾಜಕಾರಣದ ಹಿನ್ನೆಲೆಯಲ್ಲಿ ಹೊಂದಿರುವವರಲ್ಲಿ ಪುರುಷರಿಗಿಂತ ಮಹಿಳಾ ಜನಪ್ರತಿನಿಧಿಗಳೇ ಹೆಚ್ಚಿದ್ದಾರೆ. 4665 ಪುರುಷ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಲ್ಲಿ 856 (ಶೇ. 18) ಜನರಿಗೆ ಕುಟುಂಬ ರಾಜಕಾರಣದ ಹಿನ್ನೆಲೆ ಇದ್ದರೆ, 539 ಮಹಿಳಾ ಜನಪ್ರತಿನಿಧಿಗಳಲ್ಲಿ 251 (ಶೇ. 47) ಜನರು ಕುಟುಂಬ ರಾಜಕಾರಣದ ಹಿನ್ನೆಲೆಯಿಂದ ಬಂದವರಾಗಿದ್ದಾರೆ.