

ಬೆಂಗಳೂರು: ನಟ ಪುನೀತ್ ರಾಜ್ಕುಮಾರ್ ನಿರ್ಮಾಣದ ಮುಂದಿನ ಚಿತ್ರ ಹಾಗೂ ಸಂಕಷ್ಟಕರ ಗಣಪತಿ ಚಿತ್ರಖ್ಯಾತಿಯ ಲಿಖಿತ್ ಶೆಟ್ಟಿ ಅಭಿನಯದ "ಫ್ಯಾಮಿಲಿ ಪ್ಯಾಕ್" ಚಿತ್ರದ ಮೋಷನ್ ಪೋಸ್ಟರ್ ನಿನ್ನೆಯಷ್ಟೇ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಮೋಷನ್ ಪೋಸ್ಟರ್ ಬಿಡುಗಡೆ ಕುರಿತು ಬಾಲಿವುಡ್ ಸಿನಿಮಾ ವಿಮರ್ಶಕ ತರುಣ್ ಆದರ್ಶ್ ಅವರು ಟ್ವೀಟ್ ಮಾಡಿದ್ದು, ನೆಟ್ಟಿಗರು ಪ್ರತಿಕ್ರಿಯಿಸಿ ಪುನೀತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಸ್ವಜನಪಕ್ಷಪಾತವಿಲ್ಲ. ಪುನೀತ್ ಅವರು ತಮ್ಮ ಬ್ಯಾನರ್ ಅಡಿಯಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಬೆಳೆಸುತ್ತಿದ್ದಾರೆ ಎಂದು ಹೊಗಳಿಕೆಯ ಕಾಮೆಂಟ್ಗಳು ಹರಿದುಬಂದಿದ್ದು, ಫ್ಯಾಮಿಲಿ ಪ್ಯಾಕ್ ಚಿತ್ರಕ್ಕೆ ಶುಭಕೋರಿದ್ದಾರೆ.
ಚಿತ್ರದಲ್ಲಿ ನಾಯಕನಾಗಿ ಲಿಖಿತ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ವಿಭಿನ್ನ ಕತೆಯನ್ನು ಹೊಂದಿದ್ದ ಸಂಕಷ್ಟಕರ ಗಣಪತಿ ಚಿತ್ರವನ್ನು ನಿರ್ದೇಶಿಸಿದ್ದ ಅರ್ಜುನ್ ಕುಮಾರ್ ಅವರೇ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮೊದಲ ಚಿತ್ರದಲ್ಲೇ ಸ್ಯಾಂಡಲ್ವುಡ್ ಗಮನ ಸೆಳೆದಿದ್ದ ಅರ್ಜುನ್ ಮತ್ತು ಲಿಖಿತ್ ಮತ್ತೊಮ್ಮೆ ತಮ್ಮ ಜುಗಲ್ಬಂಧಿ ಮುಂದುವರಿಸಲಿದ್ದು, ಈ ಬಾರಿ ಅವರ ಬೆನ್ನಿಗೆ ಪುನೀತ್ ನಿಂತಿರುವುದು ದೊಡ್ಡ ಪವರ್ ಬಂದಂತಾಗಿದೆ.
ಚಿತ್ರಕ್ಕೆ ನಾಯಕಿಯಾಗಿ ಲವ್ ಮಾಕ್ಟೇಲ್ ಖ್ಯಾತಿಯ ಅಮೃತಾ ಅಯ್ಯಂಗರ್ ಬಣ್ಣ ಹಚ್ಚಿದ್ದಾರೆ. ಗುರುಕಿರಣ್ ಅವರ ಸಂಗೀತವಿದ್ದು, ರಂಗಾಯಣ ರಘು, ಅಚ್ಯುತ್ ಕುಮಾರ್ ಸೇರಿದಂತೆ ಪ್ರಮುಖ ತಾರಾಗಣವೇ ಈ ಸಿನಿಮಾದಲ್ಲಿರಲಿದೆ.