

ಜೈಪುರ: ರಾಜಸ್ಥಾನದ ಜೈಪುರದ ಚೋಮು ಪ್ರದೇಶದಲ್ಲಿ ವೇಗವಾಗಿ ಬಂದ ಥಾರ್ ವಾಹನವು ಮೂರು ಬೈಕ್ಗಳಿಗೆ ಡಿಕ್ಕಿ (Accident) ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ ಎಂದು ಮಾಹಿತಿ ಬಂದಿದೆ.
7 ಬಲಿಪಶುಗಳು ಒಂದೇ ಕುಟುಂಬದ ಸದಸ್ಯರು ಮತ್ತು ಜೈಪುರದ ನಂಗಲ್ ಜೈಸಾ ಬೊಹ್ರಾ ನಿವಾಸಿಗಳು ಎಂದು ತಿಳಿದುಬಂದಿದೆ. ಮೃತರನ್ನು ವೀರೇಂದ್ರ ಶ್ರೀವಾಸ್ತವ ಸುನಿಲ್ ಶ್ರೀವಾಸ್ತವ , ಲಕ್ಕಿ ಶ್ರೀವಾಸ್ತವ (30), ಶ್ವೇತಾ ಶ್ರೀವಾಸ್ತವ (26) ಎಂದು ಗುರುತಿಸಲಾಗಿದೆ.
ಚೋಮು ಪೊಲೀಸ್ ಠಾಣೆಯ ಉಸ್ತುವಾರಿ ಪ್ರದೀಪ್ ಶರ್ಮಾ ಪ್ರಕಾರ, ಘಟನೆಯು ಬೆಳಗಿನ ಜಾವ 3 ಗಂಟೆ ಸುಮಾರಿಗೆ ರಾಂಪುರ ಕಲ್ವರ್ಟ್ ಬಳಿ ನಡೆದಿದೆ. ಅತಿ ವೇಗದಲ್ಲಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ 3 ಬೈಕ್ಗಳಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, 6 ಜನರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.
ಸ್ಥಳೀಯರು ಗಾಯಾಳುಗಳನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಚೋಮು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೈಪುರದ ಎಸ್ಎಂಎಸ್ ಆಸ್ಪತ್ರೆಗೆ ರವಾನಿಸಿದರು. ಈ ವೇಳೆ ಮಹಿಳೆ ಸೇರಿದಂತೆ ಮೂವರು ಗಾಯಾಳುಗಳು ಮೃತಪ್ಪಟಿದ್ದು, ಸಾವಿನ ಸಂಖ್ಯೆ 4 ಕ್ಕೆ ಏರಿಕೆಯಾಯಿತು.
ಘಟನೆ ನಡೆದ ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಅಪಘಾತಕ್ಕೆ ಕಾರಣವಾದ ಥಾರ್ ವಾಹನವನ್ನು ವಶಪಡಿಸಿಕೊಂಡಿದ್ದು, ಅಪಘಾತಕ್ಕೆ ಕಾರಣ ಏನೆಂಬುದನ್ನು ತನಿಖೆ ಆರಂಭಿಸಿದ್ದಾರೆ. ಅತಿ ವೇಗ ಮತ್ತು ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣವಾಗಿರಹುದು ಎಂದು ಶಂಕಿಸಲಾಗಿದೆ. (ಏಜೆನ್ಸೀಸ್)