

ಮಧುಗಿರಿ: ಬಿಜೆಪಿಯವರು ಸುಳ್ಳು ಆಶ್ವಾಸನೆಗಳನ್ನು ನೀಡುವ ಮೂಲಕ ಬಡವರು, ರೈತರು ಮತ್ತು ಮಹಿಳೆಯರನ್ನು ವಂಚಿಸುತ್ತಿದ್ದಾರೆ ಎಂದು ಕೆಜಿಎ್ ಶಾಸಕಿ ಎಂ.ರೂಪಕಲಾ ಆರೋಪಿಸಿದರು.
ಎಪಿಎಂಸಿ ಹಿಂಭಾಗ ತಾಲೂಕು ಕಾಂಗ್ರೆಸ್ ಗುರುವಾರ ಆಯೋಜಿಸಿದ್ದ ಬೂತ್‌ಮಟ್ಟದ ಮಹಿಳಾ ಕಾಂಗ್ರೆಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಸರ್ಕಾರ ಬಡ ಜನತೆಗೆ ಉಚಿತ ಗ್ಯಾಸ್ ನೀಡುವುದಾಗಿ ಘೋಷಿಸಿ, ಸಿಲಿಂಡರ್ ಬೆಲೆಯನ್ನು 1.200 ರೂ.,ಗೆ ಏರಿಸಿದೆ. ಬಡವರಿಗೆ ದುಬಾರಿ ಹಣ ತೆತ್ತು ಗ್ಯಾಸ್ ಕೊಳ್ಳುವ ಶಕ್ತಿ ಇದೆಯೇ ಎಂದು ಪ್ರಶ್ನಿಸಿದರು.
ಇಲ್ಲಿಯವರೆಗೂ ಯಾವುದೇ ಬ್ಯಾಂಕ್ ಅಧಿಕಾರಿಗಳು ರೈತರನ್ನು ಗೌರವಯುತವಾಗಿ ನಡೆಸಿಕೊಂಡಿಲ್ಲ. ಆದರೆ ಕೆ.ಎನ್.ರಾಜಣ್ಣ ಕ್ಷೇತ್ರದ 50 ಸಾವಿರ ಕುಟುಂಬಗಳಿಗೆ ನೆರವಾಗಿದ್ದಾರೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ನಾಗಲಕ್ಷ್ಮೀ ಮಾತನಾಡಿ, ಯಾರೇ ಚುನಾವಣೆ ಗೆಲ್ಲಬೇಕೆಂದರೂ ಮಹಿಳಾ ಮತದಾರರ ಸಹಕಾರ ಬೇಕು. ರಾಜಕೀಯಕ್ಕೆ ಮಾನವೀಯತೆ, ಯೋಗ್ಯತೆ, ಅರ್ಹತೆ ಮುಖ್ಯ. ಅರ್ಹತೆ ಗೆಲ್ಲಬೇಕು. ಹಣ ಮಂಡಿಯೂರಬೇಕು. ಯಾರು ಮಕ್ಕಳ ಭವಿಷ್ಯ ರೂಪಿಸಲು ಕ್ರಮ ಕೈಗೊಳ್ಳುವರೋ ಅಂಥವರನ್ನು ಗೆಲ್ಲಿಸಿ ಎಂದು ಕರೆ ನೀಡಿದರು. ಜೆಡಿಎಸ್ ಮಹಿಳೆ ತೆನೆ ಹೊತ್ತಿಲ್ಲ. ಕುಟುಂಬದ ಹೊರೆ ಹೊತ್ತಿದ್ದಾಳೆ. ಅವರು ಅಧಿಕಾರ ಹಿಡಿಯಲು ಇತ್ತ ಬಿಜೆಪಿ ಅತ್ತ ಕಾಂಗ್ರೆಸ್ ಎಂದು ಅಲೆಯುತ್ತಿದ್ದಾರೆ. ಜೆಡಿಎಸ್‌ಗೆ ಮತ ಹೋದರೆ ಬಿಜೆಪಿಗೆ ಹೋದಂತೆ ಎಂದು ನಾಗಲಕ್ಷ್ಮೀ ಎಚ್ಚರಿಸಿದರು.
ಕೆಪಿಸಿಸಿ ಸದಸ್ಯರಾದ ಮಲ್ಲಿಕಾರ್ಜುನಯ್ಯ, ಸಹಕಾರ ಮಹಾಮಂಡಲದ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಾಲಯ್ಯ, ಆದಿನಾರಾಯಣರೆಡ್ಡಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿ.ಜೆ.ರಾಜಣ್ಣ, ನಿರ್ದೇಶಕ ಬಿ.ನಾಗೇಶ್‌ಬಾಬು,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಮರ್ಣಮ್ಮ, ಕಾರ್ಯದರ್ಶಿ ಅನಸೂಯಮ್ಮ, ತಾಪಂ ಮಾಜಿ ಅಧ್ಯಕ್ಷೆ ಇಂದಿರಾ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಮ್ಮ, ಪ್ರಮೀಳಮ್ಮ ಇದ್ದರು.
ಆಶ್ವಾಸನೆ ಬೇಕೆ???? ಸಾಲಸೌಲಭ್ಯ ಭರವಸೆ: ನಾನು ಶಾಸಕನಾಗಿದ್ದಾಗ, ಪ್ರತಿ ಮನೆಗೂ ಸರ್ಕಾರದ ಯೋಜನೆ ಮುಟ್ಟಿಸಿದ್ದೇನೆ. ಕ್ಷೇತ್ರದಲ್ಲಿ 16400 ಮನೆಗಳ ನಿರ್ಮಾಣ ಮಾಡುವ ಮೂಲಕ ಗುಡಿಸಲುರಹಿತ ತಾಲೂಕು ಮಾಡಿದ್ದೇನೆ ಎಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು. ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಧುಗಿರಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿಸಿದ್ದು, ನಾನು ಕಂದಾಯ ಜಿಲ್ಲೆಯನ್ನಾಗಿಸಲು ಏನೆಲ್ಲ ಸವಲತ್ತುಗಳು ಬೇಕೋ ಅದೆಲ್ಲವನ್ನೂ ಕ್ಷೇತ್ರಕ್ಕೆ ಒದಗಿಸಿದ್ದೇನೆ ಎಂದರು.
ನಾನು ಮಧುಗಿರಿ ಸೊಸೆ: ಕೆಜಿಎಫ್ ಶಾಸಕಿಯಾದರೂ ನಾನು ಮಧುಗಿರಿ ಸೊಸೆ. 20 ವರ್ಷಗಳಿಂದಲೂ ನಾನು ಮಧುಗಿರಿಗೆ ಬರುತ್ತಿದ್ದೇನೆ. ರಾಜಣ್ಣ ಅವರು ಮಧುಗಿರಿಯಲ್ಲಿ ಅಭಿವೃದ್ಧಿ ಪರ್ವವನ್ನೇ ಮಾಡಿದ್ದು, ಅವರ ದೂರದೃಷ್ಟಿ ರಾಜಕಾರಣಕ್ಕೆ ಸಾಕ್ಷಿ. ಬಡವರ, ರೈತರ, ಕೂಲಿ ಕಾರ್ಮಿಕರ ಅಭಿವೃದ್ಧಿಯಾದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ನಾನು ಮಧುಗಿರಿಯ ಸೊಸೆಯಾಗಿ ಸೆರಗೊಡ್ಡಿ ಬೇಡುತ್ತಿದ್ದೇನೆ, ಈ ಬಾರಿ ರಾಜಣ್ಣ ಅವರನ್ನು ಬಹುಮತದಿಂದ ಆಶೀರ್ವದಿಸಿ ಎಂದು ಶಾಸಕಿ ಎಂ.ರೂಪಕಲಾ ಮನವಿ ಮಾಡಿದರು.