ಸರ್ಕಾರಿ ವಿವಿ ಪಿಜಿ ಕೋರ್ಸ್‌ಗಳ ದಾಖಲಾತಿ ಕುಸಿತ: ಸಿಂಡಿಕೇಟ್ ಸಭೆಗಳಲ್ಲಿ ಕಳವಳ

PG course students
Published on

ಎನ್.ಎಲ್. ಶಿವಮಾದು

ಬೆಂಗಳೂರು: ಖಾಸಗಿ ಕಾಲೇಜುಗಳ ಸಂಖ್ಯೆ ಹೆಚ್ಚಳ, ಬದಲಾದ ಶಿಕ್ಷಣ ನೀತಿಗಳು, ಪ್ಲೇಸ್‌ಮೆಂಟ್, ಕೌಶಲ ಸೇರಿ ಹಲವು ಕಾರಣಗಳಿಂದ ರಾಜ್ಯದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರರ ಪದವಿ ವ್ಯಾಸಂಗ ಮಾಡುವವರ ಸಂಖ್ಯೆ ಕುಸಿತವಾಗುತ್ತಿವೆ.

ಕೆಲವು ವಿಶ್ವವಿದ್ಯಾಲಯಗಳಲ್ಲಿ 3 ಮತ್ತು 4ನೇ ಸುತ್ತಿನ ಸೀಟು ಹಂಚಿಕೆ ಮಾಡಿದರೂ ಸೀಟುಗಳು ಭರ್ತಿಯಾಗುತ್ತಿಲ್ಲ. ಇದರಿಂದ ವಿಶ್ವವಿದ್ಯಾಲಯಗಳ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮಗಳು ಬೀರುತ್ತಿವೆ.

ವಿದ್ಯಾರ್ಥಿಗಳನ್ನು ಆಕರ್ಷಿಸುವಲ್ಲಿ ವಿಲ:

ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿಯೇ ಸಾಕಷ್ಟು ಸಮಸ್ಯೆಗಳು ತಲೆದೋರಿವೆ. ಕಾಯಂ ಬೋಧಕ ಸಿಬ್ಬಂದಿ ಕೊರತೆ, ಮೂಲ ಸೌಕರ್ಯ ಕೊರತೆಗಳನ್ನು ಸಾಮಾನ್ಯವಾಗಿ ಎಲ್ಲ ವಿವಿಗಳು ಎದುರಿಸುತ್ತಿವೆ. ಇದರ ಜತೆಗೆ ಆಧುನಿಕ ಕಾಲಕ್ಕೆ ತಕ್ಕಂತೆ ಯಾವ ಕೋರ್ಸ್ ಅಧ್ಯಯನದಿಂದ ಏನೆಲ್ಲ ಉಪಯೋಗಗಳಿವೆ? ಎಂದು ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ವಿಲವಾಗುತ್ತಿವೆ. ಕೋರ್ಸ್‌ಗಳನ್ನು ಅಪ್‌ಡೇಟ್ ಮಾಡದಿರುವುದು ಹಾಗೂ ಅಂತಿಮವಾಗಿ ಉದ್ಯೋಗವೇ ಮುಖ್ಯವಾಗುವ ಕಾರಣ ಸರ್ಕಾರಿ ವಿವಿಗಳಲ್ಲಿ ಸ್ನಾತಕೋತ್ತರ ಕೋರ್ಸ್ ವ್ಯಾಸಂಗಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ.

ಖಾಸಗಿ ಕಾಲೇಜುಗಳ ಸಂಖ್ಯೆ ಹೆಚ್ಚಳ:

ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ 2017-18ರಲ್ಲಿ 4,652 ಇದ್ದ ಕಾಲೇಜುಗಳ ಸಂಖ್ಯೆಯು 5889ಕ್ಕೆ ಹಚ್ಚಳವಾಗಿವೆ. ಸಾರ್ವಜನಿಕ ವಿವಿಗಳಲ್ಲಿ ದಾಖಲಾತಿ ಕುಸಿಯುಲು ಪ್ರಮುಖ ಕಾರಣವಾಗಿದೆ.

ಖಾಸಗಿ ಕಾಲೇಜುಗಳಿಗೆ ಆಸಕ್ತಿ:

ವೃತ್ತಿ ಕೋರ್ಸ್‌ಗಳಲ್ಲಿ ಮಾತ್ರವಲ್ಲದೆ, ಸಾಮಾನ್ಯ ಕೋರ್ಸ್‌ಗಳಲ್ಲಿಯೂ ವಿದ್ಯಾರ್ಥಿಗಳಿಗೆ ಔದ್ಯೋಗಿಕ ದೃಷ್ಟಿಯಿಂದ ಕಂಪನಿಗಳಲ್ಲಿ ಒಡಂಬಡಿಕೆ ಮಾಡಿಕೊಳ್ಳುವುದು, ಉದ್ಯೋಗಕ್ಕೆ ಬೇಕಾದ ಕೌಶಲ ಅಲ್ಪಾವಧಿ ಕೋರ್ಸ್‌ಗಳ ಪರಿಚಯ, ಮೂಲ ಸೌಕರ್ಯ ಸೇರಿದಂತೆ ಹಲವು ರೀತಿಯಲ್ಲಿ ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ. ಇದರಿಂದ ಸರ್ಕಾರಿ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತಕ್ಕೆ ಕಾರಣವಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ನಿರುದ್ಯೋಗ ಸಮಸ್ಯೆ ಕೂಡ ಕಾರಣ:

ಬದಲಾದ ಶಿಕ್ಷಣ ನೀತಿಗಳು ಹಾಗೂ ನಿರುದ್ಯೋಗ ಸಮಸ್ಯೆ ಕೂಡ ಯುವಕರು ಸ್ನಾತಕೋತ್ತರ ಪದವಿಯತ್ತ ನಿರುತ್ಸಾಹ ಕಾಣಲು ಕಾರಣವಾಗಿದೆ. ಪದವಿ ಮುಗಿಸಿದ ನಂತರ ಸಣ್ಣ ಪುಟ್ಟ ಕೆಲಸ ಸಿಕ್ಕಿದರೂ ಯುವಕರು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಲು ಆಸಕ್ತಿ ತೋರುವುದಿಲ್ಲ. ಕೆಲಸದ ಕಡೆ ಗಮನ ಹರಿಸುತ್ತಾರೆ.

ಒಂದು ವೇಳೆ ಉದ್ಯೋಗದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿ. ಯಂತಹ ಉನ್ನತ ವ್ಯಾಸಂಗ ಅವಶ್ಯಕತೆ ಇದೆ ಎಂದಾದಲ್ಲಿ ಮಾತ್ರ ಆಸಕ್ತಿ ತೋರುತ್ತಾರೆ. ಇಲ್ಲವಾದಲ್ಲಿ ಸ್ನಾತಕ ಪದವಿಗೆ ವ್ಯಾಸಂಗವನ್ನು ಕೊನೆಗೊಳಿಸುತ್ತಿದ್ದಾರೆ ಎನ್ನುತ್ತಾರೆ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಎಂ. ಜಯಕರ್.

ಜಿಇಆರ್ ಹೆಚ್ಚಳಕ್ಕೆ ಸರ್ಕಾರ ಕ್ರಮ

ರಾಜ್ಯದಲ್ಲಿ ಉನ್ನತ ಶಿಕ್ಷಣದಲ್ಲಿ ಒಟ್ಟು ದಾಖಲಾತಿ ಅನುಪಾತವು (ಜಿಇಆರ್) ರಾಜ್ಯದಲ್ಲಿ ಶೇ.36.2ರಷ್ಟಿದೆ. ಇದನ್ನು ಶೇ.50ಕ್ಕೆ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರ್ಕಾರವು ಪ್ರಯತ್ನಿಸುತ್ತಿದೆ. ಆದರೆ, ಮತ್ತೊಂದೆಡೆ ಸರ್ಕಾರಿ ವಿಶ್ವವಿದ್ಯಾಲಯಗಳತ್ತ ಗಮನ ಹರಿಸದಿರುವುದು ಕೂಡ ಆತಂಕಕಾರಿ ಬೆಳವಣಿಗೆಯಾಗಿದೆ.

ಸಿಂಡಿಕೇಟ್ ಸಭೆಯಲ್ಲಿ ಕಳವಳ

ಸ್ನಾತಕೋತ್ತರ ಪದವಿ ಸರ್ಕಾರಿ ಕಾಲೇಜುಗಳಲ್ಲಿ ದಾಖಲಾತಿ ಕುಸಿಯುತ್ತಿರುವ ಬಗ್ಗೆ ಹಲವು ಸಿಂಡಿಕೇಟ್ ಸಭೆಗಳಲ್ಲಿ ಕಳವಳ ವ್ಯಕ್ತವಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಗಳು ಕೇಳಿಬಂದಿವೆ.

ಪದವಿ ಬಳಿಕ ವಿಶೇಷವಾಗಿ ನಿಗದಿತ ಗುರಿ ಇದ್ದವರು ಮಾತ್ರ ಸ್ನಾತಕೋತ್ತರ ಪದವಿಗೆ ಸೇರ್ಪಡೆಯಾಗುತ್ತದೆ. ಆದರೆ, ಸಾರ್ವಜನಿಕ ವಿಶ್ವವಿದ್ಯಾಲಯದಲ್ಲಿ ದಾಖಲಾತಿ ಹೆಚ್ಚಿಸಲು ಸರ್ಕಾರವು ಎಲ್ಲ ರೀತಿಯ ಕ್ರಮ ಕೈಗೊಳ್ಳುತ್ತಿದೆ.

- ಡಾ. ಎಸ್.ಎಂ. ಜಯಕರ್, ಬೆಂ.ವಿವಿ ಕುಲಪತಿ

ಬೆಂಗಳೂರು ವಿವಿ (ಕ್ಯಾಂಪಸ್) ದಾಖಲಾತಿ

ವರ್ಷ ಒಟ್ಟು ಸೀಟುಗಳು ಭರ್ತಿ ಸೀಟುಗಳು

2020-21 2,939 2,227

2021-22 3,037 1,139

2022-23 2,962 2,156

2023-24 3,657 1,882

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net