

ಮುಂಬೈ: ಮಂಗಳವಾರದ ವಹಿವಾಟಿನಲ್ಲಿ ಷೇರುಪೇಟೆ ಭಾರಿ ಕುಸಿತಕ್ಕೆ ಸಾಕ್ಷಿಯಾಯಿತು. ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್ಇ) ಸೆನ್ಸೆಕ್ಸ್ 930 ಅಂಶಗಳ ಇಳಿಕೆ ಕಂಡು (1.15%) 80,220ಕ್ಕೆ ಇಳಿಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್ಎಸ್ಇ) ನಿಫ್ಟಿ 309 ಅಂಶಗಳ ಕುಸಿತ ದಾಖಲಿಸುವ ಮೂಲಕ (1.25%) 24,472ಕ್ಕೆ ಸ್ಥಿರಗೊಂಡಿತು. ಇನ್ನು, ಬಿಎಸ್ಇ ಸ್ಮಾಲ್ಕ್ಯಾಪ್ ಅಂತೂ 2,118 (3.81%) ಅಂಶಗಳ ಭಾರಿ ಕುಸಿತ ದಾಖಲಿಸಿ, 53,530ಕ್ಕೆ ದಿನದ ವಹಿವಾಟು ಕೊನೆಗೊಳಿಸಿತು. ಬಿಎಸ್ಇ ಮಿಡ್ಕ್ಯಾಪ್ 1,190 ಅಂಶಗಳ ಇಳಿಕೆ ಕಂಡು (2.52%) 45,974 ಅಂಶಗಳಿಗೆ ಸ್ಥಿರಗೊಂಡಿತು. ಈ ಇಳಿಕೆಯ ಪರಿಣಾಮವಾಗಿ ಹೂಡಿಕೆದಾರರ ಸಂಪತ್ತು ಒಂದೇ ದಿನದಲ್ಲಿ 9 ಲಕ್ಷ ಕೋಟಿ ರೂ. ಕರಗಿತು.
ಸೆನ್ಸೆಕ್ಸ್ನ 30 ಷೇರುಗಳಲ್ಲಿ 27 ನಷ್ಟ ಅನುಭವಸಿದರೆ, 3 ಮಾತ್ರ ಲಾಭ ಮಾಡಿಕೊಂಡವು. ಎನ್ಎಸ್ಇಯ 50 ಷೇರುಗಳ ಪೈಕಿ 47 ನಷ್ಟ ಅನುಭವಿಸಿದರೆ, 3 ಲಾಭ ಕಂಡವು. ಎನ್ಎಸ್ಇಯ ಎಲ್ಲ ವಲಯಗಳು ಕುಸಿತದೊಂದಿಗೆ ವಹಿವಾಟು ಮುಗಿಸಿದವು. ನಿಫ್ಟಿಯಲ್ಲಿ ಭಾರತ್ ಇಲೆಕ್ಟ್ರಾನಿಕ್ಸ್ (3.79%), ಮಹೀಂದ್ರಾ ಆಂಡ್ ಮಹೀಂದ್ರಾ (3.63%) ಹಾಗೂ ಕೋಲ್ ಇಂಡಿಯಾ (3.36%) ಭಾರಿ ನಷ್ಟ ಅನುಭವಿಸಿದವು. ಎನ್ಎಸ್ಇ ಅಂಕಿ-ಅಂಶಗಳ ಪ್ರಕಾರ, ಸೋಮವಾರದಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐಎಸ್) 2,261 ಕೋಟಿ ರೂ.ಗಳ ಷೇರು ಮಾರಾಟ ಮಾಡಿದರು. ದೇಶೀಯ ಸಾಂಸ್ಥಿಕ ಹೂಡಿಕೆದಾರರು (ಡಿಐಐಎಸ್) 3,225 ಕೋಟಿ ರೂ.ಗಳ ಷೇರು ಖರೀದಿಸಿ ದರು. ಜಪಾನಿನ ನಿಕ್ಕಿ ಶೇ.1.39ರಷ್ಟು ಹಾಗೂ ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕ ಶೇ.1.31ರಷ್ಟು ಕುಸಿಯಿತು.
ಮೊದಲ ದಿನವೇ ನಷ್ಟ ಕಂಡ ಹ್ಯುಂಡೈ ಮೋಟರ್ಸ್: ಹೂಡಿಕೆದಾರರಿಂದ ಬಂಡವಾಳ ನಿರೀಕ್ಷಿಸಿ ಷೇರುಪೇಟೆ ಪ್ರವೇಶಿಸಿದ ದಕ್ಷಿಣ ಕೊರಿಯಾದ ಹ್ಯುಂಡೈ ಮೋಟರ್ಸ್ ಕಂಪನಿ ಮೊದಲ ದಿನವೇ (ಮಂಗಳವಾರ) ಶೇಕಡ 7.12ರಷ್ಟು ಕುಸಿತ ದಾಖಲಿಸಿತು. 30 ಸಾವಿರ ಕೋಟಿ ರೂ. ಬಂಡವಾಳ ನಿರೀಕ್ಷಿಸಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಹ್ಯುಂಡೈ ಷೇರುಪೇಟೆ ಪ್ರವೇಶಿಸಿತ್ತು. 1960 ರೂ.ಗಳ ದರದಲ್ಲಿ ಬಿಎಸ್ಇಯಲ್ಲಿ ಲಿಸ್ಟಿಂಗ್ ಆದ ನಂತರ ಷೇರುಪೇಟೆಯಲ್ಲಿ ಮೊದಲ ದಿನದ ವಹಿವಾಟು ನಡೆಸಿದ ಹ್ಯುಂಡೈ ಮೋಟರ್ಸ್ ದಿನದ ಕೊನೆಯಲ್ಲಿ ಶೇ.7.12 ಕುಸಿತದೊಂದಿಗೆ ಕಂಪನಿಯ ಷೇರು ಮೌಲ್ಯವು 1,820.40 ರೂ.ಗೆ ಕುಸಿಯಿತು. ಬಿಎಸ್ಇಯಲ್ಲಿ ಹ್ಯುಂಡೈ ಕಂಪನಿಯ ಮಾರುಕಟ್ಟೆ ಮೌಲ್ಯವು 1,47,914.98 ಕೋಟಿ ರೂ.ಗಳಷ್ಟಿದೆ.
ಒಂದು ಲಕ್ಷ ರೂ. ಗಡಿ ದಾಟಿದ ಬೆಳ್ಳಿ ಧಾರಣೆ: ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಉಳಿದಿದ್ದು ದೇಶೀಯ ಆಭರಣ ವ್ಯಾಪಾರಿಗಳಿಂದ ಚಿನ್ನ ಮತ್ತು ಬೆಳ್ಳಿಯ ಖರೀದಿ ಪ್ರಮಾಣ ಹೆಚ್ಚಿದೆ. ಗ್ರಾಹಕರು ಕೂಡ ಹಬ್ಬದ ಹಿನ್ನೆಲೆಯಲ್ಲಿ ಬಂಗಾರ, ಬೆಳ್ಳಿ ಖರೀದಿಗೆ ಮುಂದಾಗಿರುವುದರಿಂದ ಭಾರತೀಯ ಮಾರುಕಟ್ಟೆಯಲ್ಲಿ ದರ ಹೆಚ್ಚಳಗೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಚಿನಿವಾರ ಪೇಟೆಯಲ್ಲಿ ಮಂಗಳವಾರ 10 ಗ್ರಾಂ ಚಿನ್ನದ ದರವು 350 ರೂ. ಏರಿಕೆಯಾಗಿ, 81 ಸಾವಿರ ರೂ.ಗಳಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿಗೆ 1500 ರೂ. ಏರಿಕೆಯಾಗಿದ್ದು, 1.01 ಲಕ್ಷ ರೂ.ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಕಚ್ಚಾ ತೈಲ ಬೆಲೆ ಏರಿಕೆ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಮಂಗಳವಾರ 0.61ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್ಗೆ 74.74 ಡಾಲರ್ ಆಗಿದೆ.
ಅದಾನಿ ತೆಕ್ಕೆಗೆ ಓರಿಯೆಂಟ್ ಸಿಮೆಂಟ್: ಅದಾನಿ ಸಮೂಹದ ಅಂಬುಜಾ ಸಿಮೆಂಟ್ ಕಂಪನಿಯು ಸಿ.ಕೆ.ಬಿರ್ಲಾ ಸಮೂಹದ ಓರಿಯೆಂಟ್ ಸಿಮೆಂಟ್ ಕಂಪನಿಯನ್ನು 8,100 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಳ್ಳಲಿದ್ದು, ಈ ಕುರಿತು ಎರಡೂ ಕಂಪನಿಗಳು ಮಂಗಳವಾರ ಸಹಿ ಹಾಕಿವೆ. ಅಂಬುಜಾ ಸಿಮೆಂಟ್ ದೇಶದ ಎರಡನೇ ಅತಿದೊಡ್ಡ ಸಿಮೆಂಟ್ ತಯಾರಿಕಾ ಕಂಪನಿಯಾಗಿದೆ. ಈ ವರ್ಷದಲ್ಲಿ ಇದು ಕಂಪನಿಯ ಎರಡನೇ ಸ್ವಾಧೀನವಾಗಿದೆ. ಜೂನ್ನಲ್ಲಿ ಅದಾನಿ ಸಮೂಹವು ಹೈದರಾಬಾದ್ ಮೂಲದ ಪೆನ್ನಾ ಸಿಮೆಂಟ್ ಕಂಪನಿಯನ್ನು 10,422 ಕೋಟಿ ರೂ.ಗೆ ಸ್ವಾಧೀನಪಡಿಸಿಕೊಂಡಿತ್ತು. ಓರಿಯೆಂಟ್ನ ವಾರ್ಷಿಕ ಉತ್ಪಾದನಾ ಸಾಮರ್ಥ್ಯ 85 ಲಕ್ಷ ಟನ್ ಆಗಿದೆ. ಈ ಸ್ವಾಧೀನದಿಂದ ಅದಾನಿ ಸಮೂಹದ ಸಿಮೆಂಟ್ ಉತ್ಪಾದನಾ ಸಾಮರ್ಥ್ಯವು ವಾರ್ಷಿಕವಾಗಿ 9.78 ಕೋಟಿ ಟನ್ಗೆ ಹೆಚ್ಚಲಿದೆ.
ಹೊಸತನದತ್ತ ಬಿಎಸ್ಎನ್ಎಲ್: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಹೊಸ ಆಕರ್ಷಣೆಯಲ್ಲಿ ಸಾರ್ವಜನಿಕರ ಮುಂದೆ ಬಂದಿದೆ. ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಂಗಳವಾರ ಇಲ್ಲಿ ನಡೆದ ಸಮಾರಂಭದಲ್ಲಿ ಬಿಎಸ್ಎನ್ಎಲ್ನ ಹೊಸ ಲೋಗೋವನ್ನು ಅನಾವರಣಗೊಳಿಸುವ ಜತೆಗೆ 7 ಹೊಸ ಸೇವೆಗಳಿಗೂ ಚಾಲನೆ ನೀಡಿದರು. ರಾಷ್ಟ್ರಾದ್ಯಂತ 4ಜಿ ಸೇವೆಯನ್ನು ಆರಂಭಿಸುವ ಕೆಲ ದಿನಗಳ ಮುನ್ನ ಈ ಹೊಸತನಕ್ಕೆ ಹೊರಳಿಕೊಂಡಿರುವ ಬಿಎಸ್ಎನ್ಎಲ್, ಖಾಸಗಿ ದೂರಸಂಪರ್ಕ ಸಂಸ್ಥೆಗಳೊಂದಿಗೆ ಸ್ಪರ್ಧೆಗೆ ಮುಂದಾಗುತ್ತಿದೆ.
ಬಳಕೆದಾರಸ್ನೇಹಿ ಮೊಬೈಲ್ ರಿಚಾರ್ಜ್ ಪ್ಲಾನ್ಗಳನ್ನು ಒಂದರ ಮೇಲೊಂದರಂತೆ ಘೊಷಿಸುತ್ತಿರುವ ಬಿಎಸ್ಎನ್ಎಲ್, ತನ್ನ ಗ್ರಾಹಕರಿಗೆ ಅವರ ಆಯ್ಕೆಯ ‘ವಿಐಪಿ ನಂಬರ್/ಫ್ಯಾನ್ಸಿ ನಂಬರ್’ ನೀಡಲು ಮುಂದಾಗಿದೆ. ಇ-ಹರಾಜಿನಲ್ಲಿ ಪಾಲ್ಗೊಳ್ಳುವ ಮೂಲಕ ಈ ಬಗೆಯ ನಂಬರ್ ಪಡೆಯಬಹುದಾಗಿದೆ. ಇತ್ತೀಚೆಗಷ್ಟೇ ಕೇವಲ 7 ರೂ.ಗಳ ರೀಚಾರ್ಜ್ನಲ್ಲಿ 12 ತಿಂಗಳ ವ್ಯಾಲಿಡಿಟಿ ಯೋಜನೆಯನ್ನು ಘೋಷಿಸಿದೆ. ಟಾಟಾ ಸಮೂಹದ ಜೊತೆಗೆ 1500 ಕೋಟಿ ರೂಪಾಯಿ ಒಪ್ಪಂದದ ಬಳಿಕ ಬಿಎಸ್ಎನ್ಎಲ್ ಶರವೇಗದಲ್ಲಿ ಮೇಲ್ದರ್ಜೆಗೆ ಏರುತ್ತಿದೆ.
ದರ ಹೆಚ್ಚಳ ಇಲ್ಲ: ‘ಮುಂಬರುವ ದಿನಗಳಲ್ಲಿ ಮೊಬೈಲ್ ಹಾಗೂ ಇಂಟರ್ನೆಟ್ ರಿಚಾರ್ಜ್ ದರ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಇಲ್ಲ. ಗ್ರಾಹಕರ ವಿಶ್ವಾಸ ಗೆಲ್ಲಲು ಮತ್ತು ಅವರನ್ನು ಸಂತೃಪ್ತ ಪಡಿಸಲು ಸ್ಪರ್ಧಾತ್ಮಕ ದರದಲ್ಲಿ ರಿಚಾರ್ಜ್ ಯೋಜನೆಗಳನ್ನು ಮುಂದುವರಿಸುತ್ತೇವೆ’ ಎಂದು ಬಿಎಸ್ಎನ್ಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಬರ್ಟ್ ರವಿ ಸ್ಪಷ್ಟಪಡಿಸಿದ್ದಾರೆ.
ಹೊಸ ಲೋಗೋದ ವೈಶಿಷ್ಟ್ಯ: ಹೊಸ ಲೋಗೋ ಭಾರತೀಯ ತ್ರಿವರ್ಣ ಧ್ವಜದ ಕೇಸರಿ, ಬಿಳಿ, ಹಸಿರು ಬಣ್ಣ ಒಳಗೊಂಡಿದ್ದು, ‘ಕನೆಕ್ಟಿಂಗ್ ಭಾರತ್’ ಹಾಗೂ ಅದರೊಂದಿಗೆ ‘ಸುರಕ್ಷಿತ, ವಿಶ್ವಾಸಾರ್ಹ, ಕೈಗೆಟುಕುವ’ ಎಂಬ ಘೋಷವಾಕ್ಯವನ್ನು ಹೊಂದಿದೆ. ವೃತ್ತಾಕಾರದ ಕೇಸರಿ ಬಣ್ಣದಲ್ಲಿ ಭಾರತದ ನಕಾಶೆ ಇದೆ. ಟಿಲಿಕಾಂ ತರಂಗಗಳು ಸುತ್ತುವರಿದಿರುವಂತೆ ಎರಡು ಬಾಣದ ಗುರುತುಗಳಿದ್ದು, ಅದರಲ್ಲಿ ಒಂದು ಬಿಳಿ ಬಣ್ಣ, ಮತ್ತೊಂದು ಹಸಿರು ಬಣ್ಣದಲ್ಲಿದೆ. ಒಟ್ಟಾರೆ ಈ ಮೂರು ಬಣ್ಣಗಳು ರಾಷ್ಟ್ರಧ್ವಜವನ್ನು ಪ್ರತಿನಿಧಿಸುವಂತೆ ಲೋಗೋ ವಿನ್ಯಾಸ ಮಾಡಲಾಗಿದೆ.