

ಬೆಂಗಳೂರು: ನಕಲಿ ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಆರೋಪದ ಮೇಲೆ ಸಚಿವರೊಬ್ಬರ ಆಪ್ತ ಎನ್ನಲಾದ ವ್ಯಕ್ತಿ ಸೇರಿಗೆ ಸೇರಿದ ಕಚೇರಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಭಾನುವಾರ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೌನೇಶ್ ಕುಮಾರ್, ಭಗತ್, ರಾಘವೇಂದ್ರ ಮೂವರಿಗೂ ಹೆಬ್ಬಾಳ ಪೊಲೀಸ್ ಠಾಣೆ ಪೊಲೀಸರು ನೋಟಿಸ್ ನೀಡಿ ವಿಚಾರಣೆ ಹಾಜರಾಗುವಂತೆ ಸೂಚಿಸಿದ್ದರು. ನೋಟಿಸ್ ಹಿನ್ನೆಲೆಯಲ್ಲಿ ಭಾನುವಾರ ಠಾಣೆಗೆ ಆಗಮಿಸಿದ ಮೂವರನ್ನು ತೀವ್ರ ವಿಚಾರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ದಾಖಲೆಗಳ ಸಮೇತ ಠಾಣೆಗಾ ಆಗಮಿಸಿದ ಮೂವರನ್ನು ಕೆಲವು ಗಂಟೆಗಳ ಕಾಲ ವಿಚಾರಣೆ ನಡೆಸಿ ಹಲವು ಮಾಹಿತಿಗಳನ್ನು ಕಲೆ ಹಾಕಲಾಗಿದೆ. ಅವರಿಂದ ಕೆಲ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಅಗತ್ಯಬಿದ್ದರೆ ಮತ್ತೆ ವಿಚಾರಣೆ ಹಾಜರಾಗಬೇಕು ಎಂದು ಸೂಚಿಸಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚುನಾವಣಾ ಆಯೋಗಕ್ಕೆ ಪತ್ರ
ಸಿಸಿಬಿ ದಾಳಿಯ ವೇಳೆ ಕೃತ್ಯಕ್ಕೆ ಬಳಸುತ್ತಿದ್ದ ಕಂಪ್ಯೂಟರ್, ಆಧಾರ್ ಕಾರ್ಡ್, ವೋಟರ್ ಐಡಿ, ಡಿಎಲ್ ಹಾಗೂ ಪ್ಯಾನ್ ಕಾರ್ಡ್ ತಯಾರು ಮಾಡಲು ಬಳಸುತ್ತಿದ್ದ ವಸ್ತುಗಳು ಸೇರಿ ಹಲವಾರು ವಸ್ತುಗಳು ಜಪ್ತಿ ಮಾಡಿಕೊಳ್ಳಲಾಗಿತ್ತು. ನಕಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣ ಬೆಳಕಿಗೆ ಬಂದದ್ದು ಹೇಗೆ?
ಸಿಸಿಬಿ ಪೊಲೀಸರು ಇತ್ತೀಚೆಗೆ ವೇಶ್ಯಾವಟಿಕೆ ಅಡ್ಡೆ ಮೇಲೆ ದಾಳಿ ಮಾಡಿದ್ದಾಗ ಬಾಂಗ್ಲಾದೇಶ ಮೂಲದ ಯುವತಿಯರ ಬಳಿ ನಕಲಿ ಆಧಾರ್ ಕಾರ್ಡ್ ಪತ್ತೆಯಾಗಿತ್ತು. ಇದನ್ನು ಆಧರಿಸಿ ಸಿಸಿಬಿ ಪೊಲೀಸರು ತನಿಖೆಗೆ ಇಳಿದಾಗ, ನಕಲಿ ಆಧಾರ್ ಕಾರ್ಡ್ ಜಾಲ ಪತ್ತೆಯಾಗಿದೆ. ಈ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿದ್ದ ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿ ಬಳಿಕ ಎಂ.ಎಸ್.ಎಲ್ ಟೆಕ್ನೋ ಸಲೂಷನ್ಸ್ ಮಾಲೀಕ ಮೌನೇಶ್ ಕುಮಾರ್ ಸೇರಿ ಮೂವರಿಗೂ ನೋಟಿಸ್ ನೀಡಲಾಗಿತ್ತು.