ನಕಲಿ ಶ್ಯೂರಿಟಿ ದಂಧೆ, 13 ಮಂದಿ ಸೆರೆ

arrest (1)
Published on

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಪರಾಧ ಪ್ರಕರಣಗಳಲ್ಲಿ ಬಂಧಿತರ ಜಾಮೀನಿಗೆ ನಕಲಿ ಶ್ಯೂರಿಟಿ ದಂಧೆ ಮತ್ತಷ್ಟು ವ್ಯಾಪಿಸಿದೆ. ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಮಹತ್ವದ ದಾಖಲೆ ಪತ್ರಗಳನ್ನು ಹಲಸೂರು ಗೇಟ್ ಪೊಲೀಸರು ಜಪ್ತಿ ಮಾಡಿದ್ದಾರೆ.

ನಗರದ ಮ್ಯಾಜಿಸ್ಟ್ರೇಟ್, ಸಿಟಿ ಸಿವಿಲ್ ಸೇರಿದಂತೆ ಇನ್ನಿತರ ನ್ಯಾಯಾಲಯಕ್ಕೆ ಆರೋಪಿಗಳ ಜಾಮೀನಿಗೆ ನಕಲಿ ದಾಖಲೆ ಸಲ್ಲಿಸುತ್ತಿದ್ದ ಆರೋಪಿಗಳಾದ ಮಂಜುನಾಥ್, ಆನಂದ್, ಇಂದ್ರೆಶ್, ದೊಡ್ಡಯ್ಯ, ಚಂದ್ರಶೇಖರ್, ಸಂತೋಷ್ ಕುಮಾರ್, ದಾದಾ ಹಯಾತ್ ಖಲಂದರ್, ಸ್ವರೂಪ್, ಮನೋಜ್, ಆನಂದ್ ಕುಮಾರ್, ಕೆಂಪೇಗೌಡ ಮತ್ತು ವಿನಾಯಕ್ ಬಂಧಿತರು. ನ.29ರಂದು ಹಲಸೂರು ಗೇಟ್ ಪೊಲೀಸರ ಕೈಗೆ ರೆಡ್‌ಹ್ಯಾಂಡ್ ಆಗಿ ಕೆಲವರು ಸೆರೆಸಿಕ್ಕಿದ್ದರು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮತ್ತಷ್ಟು ಆರೋಪಿಗಳ ಸುಳಿವು ಲಭ್ಯವಾಗಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತ ಆರೋಪಿಗಳ ಕಡೆಯಿಂದ 139 ವಿವಿಧ ಹೆಸರು, ಸಂಖ್ಯೆಯ ಆಧಾರ್‌ಗಳು, 43 ಪಡಿತರ ಚೀಟಿಗಳು, 16 ಪ್ಯಾನ್ ಕಾರ್ಡ್‌ಗಳು, ವಿವಿಧ ಹೆಸರಿನ 35 ಪಹಣಿ, ಮ್ಯುಟೇಷನ್ ಹಾಗೂ 13 ಮೊಬೈಲ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯದಲ್ಲಿ ಹಲವರು ಭಾಗಿಯಾಗಿದ್ದು, ಶೋಧ ಕಾರ್ಯ ಮುಂದುವೆರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ನೃಪತುಂಗ ರಸ್ತೆಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆಯ ರಸ್ತೆಬದಿ ನಕಲಿ ದಾಖಲೆ ಇಟ್ಟುಕೊಂಡು ಶ್ಯೂರಿಟಿ ನೀಡಲು ಸಜ್ಜಾಗಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಕೆಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ನಕಲಿ ಜಾಮೀನು ಮಾಫಿಯಾ ಬೆಳಕಿಗೆ ಬಂದಿದೆ. ಪ್ರಮುಖ ಆರೋಪಿಗಳಾದ ಮಂಜುನಾಥ್ ಸೇರಿ ಇನ್ನಿತರರು ಹಲವು ವರ್ಷಗಳಿಂದ ದಂಧೆಯಲ್ಲಿ ಭಾಗಿಯಾಗಿದ್ದರು. 40ಕ್ಕಿಂತ ಹೆಚ್ಚು ಆರೋಪಿಗಳಿಗೆ ನಕಲಿ ಜಾಮೀನು ನೀಡಿರುವುದು ಬೆಳಕಿಗೆ ಬಂದಿದೆ.

ಗಾಂಧಿನಗರ ಕಚೇರಿಯಲ್ಲಿ ವ್ಯವಸ್ಥಿತವಾಗಿ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಆರೋಪಿಗಳು ಅಸಲಿ ಆಸ್ತಿ ಮಾಲೀಕರ ವಿವರವನ್ನು ಕಂದಾಯ ಇಲಾಖೆಯ ಭೂಮಿ ಜಾಲತಾಣದಲ್ಲಿ ಪಡೆಯುತ್ತಿದ್ದರು. ಸರ್ವೇ ನಂಬರ್, ಮನೆ ವಿಳಾಸ ಸೇರಿದಂತೆ ಅಗತ್ಯ ಮಾಹಿತಿಯನ್ನು ಪಡೆದು ನಕಲಿ ಆಧಾರ್‌ನಲ್ಲಿ ಆರೋಪಿಯ ಭಾವಚಿತ್ರ, ನಕಲಿ ಸಂಖ್ಯೆ ಹಾಗೂ ಆಸಲಿ ಮಾಲೀಕರ ವಿಳಾಸ ಹಾಕುತ್ತಿದ್ದರು. ಪಹಣಿ ಇದೇ ಮಾದರಿಯಲ್ಲಿ ನಕಲು ಮಾಡುತ್ತಿದ್ದರು. ಬ್ಯಾಂಕ್ ಲೋನ್ ತೆಗೆದುಕೊಳ್ಳದ ಆಸ್ತಿ ಮಾಲೀಕರ ಪಹಣಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net