ನಕಲಿ​ ಐಡಿ, ಪಿಎಚ್‌ಡಿ! ಎಲ್ಲರ ಕಣ್ತಪ್ಪಿಸಿ ಐಐಟಿ-ಬಾಂಬೆಯಲ್ಲಿ 14 ದಿನಗಳ ಕಾಲ ವಾಸ; ನಿದ್ರೆಯಿಂದ ಸಿಕ್ಕಿಬಿದ್ದ ಯುವಕ | IIT Bombay

ವಿಜಯವಾಣಿ - 2025-07-01T220515.543
Published on

IIT Bombay: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ (ಐಐಟಿ-ಬಾಂಬೆ) ಕಟ್ಟಡದೊಳಗೆ ನಕಲಿ ಐಡಿ, ಪಿಎಚ್​ಡಿ ಇಟ್ಟುಕೊಂಡು ನುಸುಳಿದ್ದ ಯುವಕ ಕಡೆಗೂ ಸಿಕ್ಕಿಬಿದ್ದಿದ್ದಾನೆ. 14 ದಿನಗಳ ಕಾಲ ಹೈ ಸೆಕ್ಯುರಿಟಿ ಕ್ಯಾಂಪಸ್‌ನಲ್ಲಿ ಯಾರ ಕಣ್ಣಿಗೂ ಅನುಮಾನಸ್ಪದ ವ್ಯಕ್ತಿಯಂತೆ ಬೀಳದೆ, ತಾನೂ ಒಬ್ಬ ವಿದ್ಯಾರ್ಥಿಯಂತೆ ತಿರುಗಾಡಿದ ಬಿಲಾಲ್​ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಯುವಕನನ್ನು ಬಿಲಾಲ್ ಅಹ್ಮದ್ ತೇಲಿ (22) ಎಂದು ಗುರುತಿಸಲಾಗಿದೆ. ಐಐಟಿ-ಬಾಂಬೆಯೊಳಗೆ ನಕಲಿ ಐಡಿ ಮತ್ತು ಪಿಎಚ್​ಡಿ ಮಾಡಿರುವುದಾಗಿ ಹೇಳಿಕೊಂಡು 2 ವಾರಗಳ ಕಾಲ ಓಡಾಡಿಕೊಂಡಿದ್ದ ಈತ, ಸೋಫಾದ ಮೇಲೆ ನಿದ್ರೆಗೆ ಜಾರಿದ್ದ ವೇಳೆ ಉದ್ಯೋಗಿಯೊಬ್ಬರಿಗೆ ಸಿಕ್ಕಿ ಬಿದಿದ್ದೇ ರೋಚಕ. ಸೋಫಾ ಮೇಲೆ ನಿದ್ರಿಸುತ್ತಿದ್ದ ಬಿಲಾಲ್​ನನ್ನು ಉದ್ಯೋಗಿಯೊಬ್ಬರು ಬಡಿದೆಬ್ಬಿಸಿದ್ದಾರೆ. ನೀನ್ಯಾರು ಎಂದು ಕೇಳ್ತಿದ್ದಂತೆ ಆತ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ. ಈ ವೇಳೆ ಸಿಸಿಟಿವಿ ದೃಶ್ಯ ಆತನ ಅಸಲಿ ಮುಖವಾಡವನ್ನು ಬಯಲು ಮಾಡಿದೆ.

ಯುವಕನ ಗುರುತನ್ನು ಪ್ರಶ್ನಿಸಿ, ಪರಿಶೀಲಿಸಿದ ಬಳಿಕ ಅದೆಲ್ಲವೂ ನಕಲಿ ಎಂಬುದು ತಿಳಿದ ನಂತರವೇ ಪೊಲೀಸರು ಬಂಧಿಸಿದ್ದಾರೆ. ಬಿಲಾಲ್ ಅಹ್ಮದ್ ತೇಲಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ, ಸಿಸಿಟಿವಿ ದೃಶ್ಯಾವಳಿಗಳನ್ನು ಸರಿಯಾಗಿ ಪರಿಶೀಲನೆ ಮಾಡಲಾಗಿದೆ. ಈ ವೇಳೆ ಆತ ಐಐಟಿಗೆ ದಾಖಲಾದ ವಿದ್ಯಾರ್ಥಿ ಅಲ್ಲವೇ ಅಲ್ಲ ಎಂಬುದು ದೃಢವಾಗಿದೆ. ಈ ಕುರಿತು ಸ್ವತಃ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಬಿಲಾಲ್ ಅಹ್ಮದ್ ತೇಲಿ ಪಿಎಚ್‌ಡಿ ವಿದ್ಯಾರ್ಥಿಯೆಂದು ಹೇಳಿಕೊಂಡು ಕ್ಯಾಂಪಸ್‌ನ ಸುತ್ತೆಲ್ಲ ಮುಕ್ತವಾಗಿ ಓಡಾಡಿದ್ದಾನೆ. ಹಾಸ್ಟೆಲ್ ಲಾಂಜ್‌ಗಳಲ್ಲಿ ಮಲಗಿ, ಉಪನ್ಯಾಸಗಳಿಗೆ ಹಾಜರಾಗಿ ಮತ್ತು ಕೃತಕ ಬುದ್ಧಿಮತ್ತೆಯ ಕುರಿತಾದ ಸೆಮಿನಾರ್​ನಲ್ಲಿಯೂ ಆತ ಭಾಗವಹಿಸಿದ್ದಾನೆ ಎಂದು ಹೇಳಿದ್ದಾರೆ. ಪ್ರಸ್ತುತ ಬಿಲಾಲ್ ಅಹ್ಮದ್ ತೇಲಿಯನ್ನು ಜುಲೈ 7 ರವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗುವುದು. ಮುಂಬೈ ಅಪರಾಧ ವಿಭಾಗ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳು ಪ್ರಕರಣದ ತನಿಖೆಯನ್ನು ಮುಂದುವರಿಸಿವೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net