

ಬೆಂಗಳೂರು: ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಂಪರ್ಕ ಸಾಧಿಸಿ ಬಿಹಾರದಿಂದ ಖೋಟಾ ನೋಟು ತಂದು ನಗರದಲ್ಲಿ ಚಲಾವಣೆ ಮಾಡುತ್ತಿದ್ದ ಮೂವರನ್ನು ಕಾಟನ್ಪೇಟೆ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ಸರವಣನ್ (34) ಮತ್ತು ಕೇರಳ ಮೂಲದ ದೇವನ್ (20), ನಿತಿನ್(19) ಬಂಧಿತರು. ಕ್ರಾಂತೀವೀರ ಸಂಗೋಳ್ಳಿ ರಾಯಣ್ಣ ರೈಲು ನಿಲ್ದಾಣದ ಮುಂಭಾಗದ ಸ್ಕೈವಾಕ್ ಬಳಿ ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ಕಾಟನ್ಪೇಟೆ ಇನ್ಸ್ಪೆಕ್ಟರ್ ಜಿ.ಬಾಲರಾಜ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 500 ರೂ. ಮುಖಬೆಲೆಯ 1307 ಖೋಟಾ ನೋಟುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.
ಬಂಧಿತ ಆರೋಪಿಗಳು ಸುಲಭವಾಗಿ ಹಣ ಸಂಪಾದನೆ ಉದ್ದೇಶದಿಂದ ೇಕ್ಕರೆನ್ಸಿ_ತಮಿಳುನಾಡು ಹಾಗೂಮೋಟೋಹ್ಯಾಕರ್.93 ಎಂಬ ಇನ್ಸ್ಟಾಗ್ರಾಮ್ನಲ್ಲಿ ಪರಿಚಯ ಆಗಿ ನಕಲಿ ನೋಟು ದಂಧೆ ನಡೆಸುತ್ತಿದ್ದರು. ಬಿಹಾರದಲ್ಲಿ ಇರುವ ಕಿಂಗ್ಪಿನ್ನನ್ನು ಸಂಪರ್ಕ ಮಾಡಿದ್ದ ಆರೋಪಿಗಳು, 25 ಸಾವಿರ ರೂ. ಅಸಲಿ ನೋಟಿಗೆ 1 ಲಕ್ಷ ರೂ. ನಕಲಿ ನೋಟಿನಂತೆ 10 ಲಕ್ಷ ರೂ. ಖೋಟಾ ನೋಟು ಪಡೆದು ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಸಣ್ಣ ಸಣ್ಣ ಪ್ರಮಾಣದಲ್ಲಿ ಚಲಾವಣೆ ಮಾಡುತ್ತಿದ್ದರು. ಇದೇ ರೀತಿ ಈ ಹಿಂದೆ ಸಹ ಮೂರ್ನಾಲ್ಕು ಲಕ್ಷ ರೂ. ನಕಲಿ ನೋಟು ತಂದು ಚಲಾವಣೆ ಮಾಡುವಲ್ಲಿ ಯಶಸ್ವಿ ಆಗಿದ್ದರು.
ಇದಾದ ಮೇಲೆ 10 ಲಕ್ಷ ರೂ. ತಂದು ಮೆಜೆಸ್ಟಿಕ್, ರೈಲು ನಿಲ್ದಾಣ, ಮಾರ್ಕೆಟ್ ಸೇರಿ ಜನಸಂದಣಿ ಇರುವ ಅಂಗಡಿ, ಮಳಿಗೆಗಳಲ್ಲಿ ಚಲಾವಣೆ ಮಾಡುತ್ತಿದ್ದರು. ಮೂವರು ಆರೋಪಿಗಳಿಗೆ ಖೋಟಾ ನೋಟು ಕೊಡುತ್ತಿದ್ದ ಬಿಹಾರದ ಪಾಟ್ನಾದ ಕಿಂಗ್ಪಿನ್ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಬಿ. ದಯಾನಂದ್ ಮಾಹಿತಿ ನೀಡಿದರು.
ಸಣ್ಣ ಸಣ್ಣ ಪ್ರಮಾಣದಲ್ಲಿ ಚಲಾವಣೆ :
ಖೋಟಾ ನೋಟುಗಳನ್ನು ಸಣ್ಣ ಸಣ್ಣ ಪ್ರಮಾಣದಲ್ಲಿ ಚಲಾವಣೆ ಮಾಡುತ್ತಿದ್ದರು. ನಕಲಿ 500 ರೂ. ನೋಟು ಕೊಟ್ಟು 100 ರೂ.ಗೆ ವಸ್ತುಗಳನ್ನು ಖರೀದಿಸಿ ಉಳಿದ 400 ರೂ. ಅಸಲಿ ನೋಟು ವಾಪಸ್ ಪಡೆಯುತ್ತಿದ್ದರು. ಇದೇ ರೀತಿ ನಕಲಿ ನೋಟು ಚಲಾವಣೆ ಮಾಡಿ ಅಸಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.